ಒಲಿಂಪಿಕ್: ಇರಾಕ್‌ ಮೇಲಿನ ನಿಷೇಧ ವಾಪಸ್

ಬುಧವಾರ, 30 ಜುಲೈ 2008 (11:48 IST)
PTI
ಬೀಜಿಂಗ್ ಒಪಿಂಪಿಕ್ಸ್‌ನಲ್ಲಿ ಸ್ಪರ್ಧಿಸದಂತೆ ಇರಾಕ್ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಮಂಗಳವಾರದಂದು ಒಪ್ಪಿಗೆ ಸೂಚಿಸಿದೆ.

ಆಗೋಸ್ಟ್ 8ರಿಂದ ಬೀಜಿಂಗ್‌‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುಂತೆ ಬಾಗ್ದಾದ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಮನವಿ ಸಲ್ಲಿಸಿತ್ತು.

ಈ ಸಂಬಂಧ ಕೊನೆಯ ಕ್ಷಣದಲ್ಲಿ ಇರಾಕ್ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾತುಕತೆ ನಡೆಸುವ ಮೂಲಕ ನಿರ್ಧಾರ ಕೈಗೊಂಡಿದ್ದು, ಇದೀಗ ಬುಧವಾರದಂದೇ ಸ್ಪರ್ಧಾಳುಗಳ ಹೆಸರು ಮತ್ತು ಭಾಗವಹಿಸುವ ಕ್ರೀಡೆಯ ವಿವರವನ್ನು ಅಂತಿಮಗೊಳಿಸಿ ಸಲ್ಲಿಸುವಂತೆ ತಾಕೀತು ಮಾಡಿದೆ.

ಆ ನಿಟ್ಟಿನಲ್ಲಿ ಇರಾಕ್ ಒಲಿಂಪಿಕ್ ಗೇಮ್ಸ್‌ಗೆ ಟ್ರ್ಯಾಕ್ ಮತ್ತು ಫೀಲ್ಡ್ ಸೇರಿದಂತೆ ಇಬ್ಬರು ಆಥ್ಲಿಟಿಗಳನ್ನು ಕಳುಹಿಸುವ ನಿರೀಕ್ಷೆಯಲ್ಲಿದೆ. ಅಲ್ಲದೇ ಅರ್ಚರಿ, ಜುಡೋ, ರೋವಿಂಗ್ ಮತ್ತು ವೇಟ್ ಲಿಫ್ಟಿಂಗ್‌‌ನ ವಿಭಾಗದಲ್ಲಿಯೂ ಸ್ಪರ್ಧಾಳುಗಳನ್ನು ಕಳುಹಿಸುವ ಕುರಿತು ಯೋಚಿಸುತ್ತಿದೆ. ಏತನ್ಮಧ್ಯೆ ಸ್ಪರ್ಧಾಳುಗಳ ಹೆಸರು ಮತ್ತು ವಿಭಾಗದ ವಿವರವನ್ನು ಸಲ್ಲಿಸುವ ದಿನಾಂಕ ಕಳೆದ ವಾರವೇ ಅಂತಿಮಗೊಂಡಿತ್ತು.

ಕಳೆದ ಮೇ ತಿಂಗಳಿನಲ್ಲಿ ಇರಾಕ್ ನ್ಯಾಷನಲ್ ಒಲಿಂಪಿಕ್ ಸಮಿತಿಯನ್ನು ಬಾಗ್ದಾದ್ ಸರಕಾರ ವಜಾಗೊಳಿಸಿತ್ತು. ಇದೀಗ ಇರಾಕ್ ಮನವಿ ಮೇರೆಗೆ ನಿಷೇಧವನ್ನು ಹಿಂತೆಗೆದು ಬೀಜಿಂಗ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

ವೆಬ್ದುನಿಯಾವನ್ನು ಓದಿ