ಕಣ್ಮನ ತಣಿಸಿದ ಒಲಿಂಪಿಕ್ಸ್ ಉದ್ಘಾಟನಾ 'ಹಬ್ಬ'

ಶುಕ್ರವಾರ, 8 ಆಗಸ್ಟ್ 2008 (18:15 IST)
ವಿಶ್ವದ ಕುತೂಹಲದ ಕಣ್ಣುಗಳನ್ನು ತಣಿಸಲು, ಟೀಕಾಕಾರರ ಬಾಯ್ಮುಚ್ಚಿಸಲು ಮತ್ತು ಚೀನಾದ ಪ್ರಾಬಲ್ಯ, ಸಾರ್ವಭೌಮತೆ, ಶಕ್ತಿಪ್ರದರ್ಶನಕ್ಕೆ ದೊರೆತ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡ ಚೀನಾ, ಅಭೂತಪೂರ್ವ ಭದ್ರತೆಯ ನಡುವೆ ಬೀಜಿಂಗ್ ಒಲಿಂಪಿಕ್ಸ್ -08 ಕ್ರೀಡಾಕೂಟಕ್ಕೆ 'ಹಕ್ಕಿಗೂಡು' (ಬರ್ಡ್ಸ್ ನೆಸ್ಟ್) ಎಂದೇ ಕರೆಯಲಾಗುವ ವಿಶಿಷ್ಟ ಆಕಾರವುಳ್ಳ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ದೂರಿಯ ಚಾಲನೆ ನೀಡಿದೆ.

08ನೇ ಇಸವಿ, 08ನೇ ತಿಂಗಳು, 08ನೇ ದಿನಾಂಕ, 08ನೇ ಗಂಟೆ, 08ನೇ ನಿಮಿಷಕ್ಕೆ ಈ ಚತುರ್ವಾರ್ಷಿಕ ವಿಶ್ವ ಕ್ರೀಡಾಕೂಟವು ವೈಭವಯುತವಾಗಿ ಅನಾವರಣಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯುವ ವೈವಿಧ್ಯಮಯ ಕ್ರೀಡಾ ಪ್ರಕಾರಗಳಲ್ಲಿ ವಿಶ್ವದ 205 ರಾಷ್ಟ್ರಗಳ ಸುಮಾರು 70 ಸಾವಿರದಷ್ಟು ಅಥ್ಲೀಟ್‌ಗಳು ತಮ್ಮ ತಮ್ಮ ರಾಷ್ಟ್ರಗಳ ಕ್ರೀಡಾ ಶಕ್ತಿ ಪ್ರದರ್ಶಿಸಲಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ (ಅಂದರೆ ಗ್ರೀನ್ವಿಚ್ ಕಾಲಮಾನ 12 ಗಂಟೆ)ಗೆ ಬಾನಂಗಳದಲ್ಲಿ ಸುಡುಮದ್ದುಗಳ ಬಣ್ಣಬಣ್ಣದ ಚಿತ್ತಾರವು ಚಿತ್ತಾಕರ್ಷಕವಾಗಿ ಮೂಡಿಬರುವುದರೊಂದಿಗೆ 29ನೇ ಒಲಿಂಪಿಯಾಡ್ ಅದ್ದೂರಿಯ ಚಾಲನೆ ಪಡೆದುಕೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಳುಗಳು, ದೇಶವಿದೇಶಗಳ ಅತಿಥಿಗಳು, ಕ್ರೀಡಾಪ್ರೇಮಿಗಳು ಸೇರಿದಂತೆ ಸುಮಾರು 1.60 ಲಕ್ಷ ಮಂದಿ ಭಾಗವಹಿಸಿದ್ದು, ಚೀನಾದ ಸಾಂಸ್ಕೃತಿಕ ವೈಭವ, ಆಕರ್ಷಕ ಸುಡುಮದ್ದಿನ ಪ್ರದರ್ಶನ, ಲೇಸರ್ ಬೆಳಕಿನಾಟದೊಂದಿಗೆ ಕಣ್ಮನ ತಣಿಸಿದ ಕ್ರೀಡಾಹಬ್ಬದ ಚಾಲನೆಗೆ ಸಾಕ್ಷಿಯಾದರು.

ಸುಮಾರು 15 ಸಾವಿರ ಮಂದಿ ಕಲಾವಿದರು, 29 ಸಾವಿರ ಸುಡುಮದ್ದುಗಳು ಈ ಕ್ರೀಡಾಕೂಟಕ್ಕೆ ವರ್ಣಮಯ, ಅದ್ದೂರಿಯ ಆರಂಭ ನೀಡಿದ್ದು, ಒಂದು ಕಾಲದಲ್ಲಿ ಚೀನಾದಿಂದ ನಿಷೇಧಿತರಾಗಿದ್ದ ಚಿತ್ರ ನಿರ್ದೇಶಕ ಝಾಂಗ್ ಯಿಮೊಯು ಅವರು, ಚೀನಾದ 5000 ವರ್ಷಗಳ ಇತಿಹಾಸವನ್ನು ಒಂದು ಪ್ರದರ್ಶನಕ್ಕೆ ಇಳಿಸುವ ಹೊಣೆಯೊಂದಿಗೆ ವಿಶಿಷ್ಟ ಪ್ರದರ್ಶನವೊಂದನ್ನು ಪ್ರಸ್ತುತಪಡಿಸಿದರು.

ವಿಶ್ವ ನಾಯಕರು ಬೀಜಿಂಗ್‌ನಲ್ಲಿ ಉದ್ಘಾಟನಾ ಸಮಾರಂಭಕ್ಕೆ ಪ್ರತ್ಯಕ್ಷಸಾಕ್ಷಿಯಾಗಿದ್ದು, ಇಡೀ ರಾಜಧಾನಿಯ ಚಿತ್ರಣವೇ ಕಳೆದ ಏಳುವರ್ಷಗಳಲ್ಲಿ ಬದಲಾಯಿಸಲಾಗಿತ್ತು. ಒಲಿಂಪಿಕ್ಸ್ ಕೂಟದೊಂದಿಗೆ ತಮ್ಮ ಸಂಸ್ಕೃತಿ, ಸಂಪತ್ತುಗಳನ್ನು, ಆರ್ಥಿಕ ಬಲಾಢ್ಯತೆಯನ್ನು, ತಾನೂ ಸೂಪರ್ ಪವರ್ ಆಗಬಲ್ಲೆ ಎಂಬುದನ್ನು ವಿಶ್ವಕ್ಕೇ ಪ್ರಚುರ ಪಡಿಸುವ ಉತ್ಸಾಹದಿಂದಾಗಿ ಚೀನಾ ಸಕಲ ರೀತಿಯಲ್ಲೂ ಬೀಜಿಂಗ್ ಅನ್ನು ಸಜ್ಜುಗೊಳಿಸಿತ್ತು.

ನಾವು ಕಳೆದ ಏಳು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಆಗಮಿಸಿದೆ ಎಂದು ಚೀನಾ ಅಧ್ಯಕ್ಷ ಹು ಜಿಂಟಾವೋ ಘೋಷಿಸಿದರು.

ಮುಖ್ಯಾಂಶಗಳು:

ಚೀನಾದ ಸಮಯ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನ ಸಂಜೆ 5.30ಕ್ಕೆ (1200 ಗ್ರೀನ್ವಿಚ್ ಸಮಯ) ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನೆಯನ್ನು ಅಧಿಕೃತವಾಗಿ ಘೋಷಿಸಿದರು.

ಆಕರ್ಷಕ ಲೇಸರ್ ಬೆಳಕಿನ ಚಿತ್ತಾರಗಳು

ಬಾನಂಗಳದಲ್ಲಿ ಸುಡುಮದ್ದಿನ ವರ್ಣಾಲಂಕಾರ

ಬೆಳಕಿನ ಚಿತ್ತಾರವು ಫೌ ಎಂಬ ಪ್ರಾಚೀನ ಚೀನೀ ಪಕ್ಕವಾದ್ಯದ ಆಕಾರದಲ್ಲಿ ಕಂಗೊಳಿಸಿತು.

2008 'ಫೌ'ಗಳು, 2008 ಕ್ರೀಡಾಳುಗಳು 2008ರ ಬೀಜಿಂಗ್ ಒಲಿಂಪಿಕ್ಸ್ ಅನ್ನು ಪ್ರತಿನಿಧಿಸಿದರು.

80ರಷ್ಟು ವಿಶ್ವ ಮುಖಂಡರು, 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬರ್ಡ್ಸ್ ನೆಸ್ಟ್ (ಹಕ್ಕಿ ಗೂಡು) ಎಂಬ ಹೆಸರಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್ ಉದ್ಘಾಟನೆಗೆ ಸಾಕ್ಷಿಯಾದರು.

2008 ಕಲಾವಿದರು 'ಫೌ'ಗಳನ್ನು ನುಡಿಸುತ್ತಾ ವಿಶ್ವಾದ್ಯಂತದ ಮಿತ್ರರನ್ನು ಸ್ವಾಗತಿಸುವ ಗೀತೆ ಹಾಡಿದರು.

"ದೂರದೂರಿಂದ ಮಿತ್ರರು ಬಂದಿಹರು, ನಮಗದೆಷ್ಟು ಸಂಭ್ರಮ" ಎಂಬ ಚೀನಾದ ಮಹಾನ್ ಪಂಡಿತ ಕನ್‌ಫ್ಯೂಷಿಯಸ್‌ನ ಸಂದೇಶವನ್ನವರು ಹಾಡಿದರು.

ಗನ್‌ಪೌಡರನ್ನು ಕಂಡುಹುಡುಕಿದ್ದ ಚೀನಾ, ಅದನ್ನು ಸಾಂಕೇತಿಕವಾಗಿ ಇಲ್ಲಿನ ಸುಡುಮದ್ದು ಪ್ರದರ್ಶನದಲ್ಲಿ ಬಳಸಿಕೊಂಡಿತ್ತು.

ಚೀನಾದ 56 ಮಂದಿ ಮಕ್ಕಳು ಚೀನೀ ರಾಷ್ಟ್ರೀಯ ಧ್ವಜವನ್ನು ಸುತ್ತುವರಿಯುವ ಮೂಲಕ ಆ ದೇಶದ 56 ಜನಾಂಗಗಳನ್ನು ಪ್ರತಿನಿಧಿಸಿದರು ಮತ್ತು ರಾಷ್ಟ್ರಧ್ವಜವನ್ನು ಬೀಸುತ್ತಾ ರಾಷ್ಟ್ರಗೀತೆಗೆ ಧ್ವನಿಗೂಡಿಸಿ ಏಕತೆಯ ಸಂದೇಶ ಸಾರಿದರು.

ವೆಬ್ದುನಿಯಾವನ್ನು ಓದಿ