ಕುಸ್ತಿ: ತೋಮರ್‌ಗೆ ಪ್ರಥಮ ಸುತ್ತಿನಲ್ಲಿ ಸೋಲು

ಗುರುವಾರ, 21 ಆಗಸ್ಟ್ 2008 (13:54 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ ಗುರುವಾರ ಬೆಳಿಗ್ಗೆ ನಡೆದ 120ಕೆಜಿ ಪುರುಷರ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ರಾಜೀವ್ ತೋಮರ್‌ ಅವರು ಅಮೆರಿಕದ ಸ್ಟೇವ್ ಮೊ ಕ್ಕೋ ವಿರುದ್ಧ ಪರಾಭವಗೊಳ್ಳುವ ಮೂಲಕ ಅರ್ಹತಾ ಪ್ರಥಮ ಸುತ್ತಿನಿಂದ ಹೊರಬಿದ್ದಿದ್ದು, ಆ ನಿಟ್ಟಿನಲ್ಲಿ ತೋಮರ್‌ಗೆ ರೆಪೆಶಾಜ್ ಅವಕಾಶ ದೊರೆಯುವ ಸಾಧ್ಯತೆ ಇದೆ.

ಇಂದು ಬೆಳಿಗ್ಗೆ ಆರಂಭಗೊಂಡ ಕುಸ್ತಿ ಹಣಾಹಣಿಯಲ್ಲಿ ಭಾರತದ ರಾಜೀವ್ ಅವರು ಮೊದಲ ಎರಡು ಸುತ್ತಿನಲ್ಲಿ ಒಂದೇ ಒಂದು ಅಂಕಗಳಿಸಲು ವಿಫಲತೆ ಕಂಡರು.

ಮೊದಲ ಸುತ್ತಿನಲ್ಲಿಯೇ ಮೊಕ್ಕೋ ಅವರು ಒಂದು ಅಂಕದ ಮುನ್ನಡೆ ಸಾಧಿಸಿದ್ದರೂ, ಆದರೂ ತೋಮರ್‌ ನಿರಾಸೆಗೆ ಒಳಗಾಗಬೇಕಾದ ಅಗತ್ಯವಿಲ್ಲ.

ರಾಜೀವ್ ತೋಮರ್‌ ಕೂಡ ರೆಪೆಶಾಜ್ ಸುತ್ತಿನಲ್ಲಿ ತಮ್ಮ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳವ ಅವಕಾಶ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ರೀತಿ ಬುಧ ವಾರ ನಡೆದ ಪಂದ್ಯದಲ್ಲೂ ಭಾರತದ ಸುಶೀಲ್ ಕುಮಾರ್ ಕೂಡ ಕುಸ್ತಿ ಪಂದ್ಯದ ಪ್ರಥಮ ಸುತ್ತಿನಲ್ಲಿ ಸೋಲನ್ನನುಭವಿಸಿದ್ದರು.

ಆದರೆ ರೆಪೆಶಾಜ್ ಅವಕಾಶದ ಮೂಲಕ ಅವರು ಕಂಚಿನ ಪದಕ ಪಡೆಯುವ ಮೂಲಕ ಭಾರತದ ಕುಸ್ತಿಪಂದ್ಯದಲ್ಲಿ ನೂತನ ಇತಿಹಾಸವನ್ನೇ ನಿರ್ಮಿಸಿದ್ದರು.

ರೆಪೆಶಾಜ್ ಎಂದರೇನು: ಈ ಫ್ರೆಂಚ್ ಪದದ ಅರ್ಥ "ರಕ್ಷಿಸು" ಅಥವಾ "ಉಳಿಸು" ಎಂಬುದಾಗಿ. ಅರ್ಹತೆಯ ಗುಣಮಟ್ಟವನ್ನು ತಲುಪಲು ಅತ್ಯಂತ ಅಲ್ಪ ಅಂತರದಿಂದ ವಿಫಲವಾದ ಸ್ಪರ್ಧಾಳುಗಳಿಗೆ ನೀಡುವ ಅವಕಾಶವಿದು.

ಕರಾಟೆ, ಜೂಡೋ, ಟೇಕ್ವಾಂಡೋ ಮತ್ತು ಕುಸ್ತಿ ಟೂರ್ನಿಗಳಲ್ಲಿ, ಪ್ರಥಮ ಮತ್ತು ದ್ವಿತೀಯ ಸ್ಥಾನಕ್ಕಾಗಿ ಫೈನಲ್ ಪಂದ್ಯದಲ್ಲಿ ಸೆಣಸಾಡುವವರನ್ನು ನಿರ್ಧರಿಸಲು ಸಿಂಗಲ್ ಎಲಿಮಿನೇಶನ್ ವಿಧಾನ ಅನುಸರಿಸಲಾಗುತ್ತದೆ.

ಈ ಫೈನಲಿಸ್ಟ್‌ಗಳ ಕೈಯಲ್ಲಿ ಸೋತ ಎಲ್ಲ ಅಥ್ಲೀಟ್‌ಗಳನ್ನೂ ಆರಿಸಿ ರೆಪೆಶಾಜ್ ವಿಧಾನದ ಮೂಲಕ ಆಡಿಸಲಾಗುತ್ತದೆ. ಈ ರೀತಿ ಮಾಡುವ ಮೂಲಕ ತೃತೀಯ ಸ್ಥಾನ ಯಾರಿಗೆ ಎಂದು ನಿರ್ಣಯಿಸಲಾಗುತ್ತದೆ. ಅಂದರೆ, ಆರಂಭಿಕ ಸುತ್ತಿನಲ್ಲಿ ಇಬ್ಬರು ಪ್ರಬಲ ಪ್ರತಿಸ್ಪರ್ಧಿಗಳು ಸೆಣಸಾಡಿದಾಗ, ಅದರಲ್ಲಿ ಸೋತ ಪ್ರಬಲ ಕ್ರೀಡಾಳುವಿಗೂ ಪದಕ ಗೆಲ್ಲುವ ಅವಕಾಶ ದೊರಕಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ