ಬೀಜಿಂಗ್: ಅಪ್ರಾಪ್ತರ ಸೇರ್ಪಡೆ - ಚೀನಾ ನಕಾರ

ಮಂಗಳವಾರ, 29 ಜುಲೈ 2008 (11:53 IST)
ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌‌ನ ತಂಡದಲ್ಲಿ ಇಬ್ಬರು ಸುಳ್ಳು ದಾಖಲೆಯೊಂದಿಗೆ ಅಪ್ರಾಪ್ತರನ್ನು ಸೇರ್ಪಡೆಗೊಳಿಸಿದ್ದಾರೆ ಎಂಬ ಆಪಾದನೆಯನ್ನು ಚೀನಾ ಜಿಮ್ನಾಸ್ಟಿಕ್ಸ್ ತಂಡದ ವರಿಷ್ಠ ಅಲ್ಲಗಳೆದಿದ್ದಾರೆ.

ಈ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿದ್ದು, ಕೆಕ್ಸಿನ್ ಮತ್ತು ಜಿಯಾಂಗ್ ಯುಯುನ್ ಎಂಬಿಬ್ಬರು 16ವರ್ಷದ ಒಳಗಿನವರಾಗಿದ್ದು, ಅವರು ಆನ್‌‌ಲೈನ್ ಮೂಲಕ ತಮ್ಮ ಹೆಸರನ್ನು ದಾಖಲಿಸಿರುವುದಾಗಿ ವರದಿ ಹೇಳಿದೆ.

ಇಂಟರ್‌‌ನ್ಯಾಷನಲ್ ಜಿಮ್ನಾಸ್ಟಿಕ್ ಫೆಡರೇಶನ್(ಎಫ್‌‌ಐಜಿಎಸ್) ಕಾನೂನಿನ್ವಯ ಮೇಜರ್ ಚಾಂಪಿಯನ್‌ಷಿಪ್ಸ್ ಮತ್ತು ಒಲಿಂಪಿಕ್ಸ್ ಗೇಮ್ಸ್‌‌ನಲ್ಲಿ ಸ್ಪರ್ಧಿಸಬೇಕಾದ ಸ್ಪರ್ಧಿಗಳಿಗೆ ಕನಿಷ್ಠ 16ವರ್ಷ ತುಂಬಿರಬೇಕು.

ಆದರೆ ಚೀನಾ ತಂಡದ ಮ್ಯಾನೇಜರ್ ಜಾಂಗ್ ಪೈವೆನ್ ಅವರು, ಅಧಿಕೃತ ದಾಖಲೆ ಆಧಾರದ ಮೇಲೆ ಎಲ್ಲ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಒಲಿಂಪಿಕ್ ಸ್ಕ್ವಾಡ್ , ಸ್ಪರ್ಧಾಳುಗಳನ್ನು ಗುರುತು ಪತ್ರ ಅಥವಾ ಸ್ಥಳೀಯ ಜಿಮ್ನಾಸ್ಟಿಕ್ಸ್ ಅಸೋಸಿಯೇಶನ್‌‌ನಿಂದ ದೃಢೀಕರಿಸಿದ ದಾಖಲೆಯೊಂದಿಗೆ ಆಯ್ಕೆ ಮಾಡಿರುವುದಾಗಿ ಅಧಿಕೃತ ಸುದ್ದಿಸಂಸ್ಥೆ ಕ್ಸಿಹುವಾಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ