ವಿಜೇಂದರ್‌ಗೆ ಹುಟ್ಟೂರಲ್ಲಿ 'ಹೀರೋ' ಸ್ವಾಗತಕ್ಕೆ ಸಿದ್ದತೆ

ಶುಕ್ರವಾರ, 22 ಆಗಸ್ಟ್ 2008 (17:49 IST)
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ಬಾಕ್ಸಿಂಗ್ ಹಣಾಹಣಿಯ ಸೆಮಿ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿರುವ ವಿಜೇಂದರ್ ಹುಟ್ಟೂರಾದ ಹರ್ಯಾಣದ ಭಿವಾನಿ ನಗರದಲ್ಲಿ ಸ್ಥಳೀಯರು,ಸಂಬಂಧಿಗಳು ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.

ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟ ವಿಜೇಂದರ್‌ಗೆ ಊರಿನಲ್ಲಿ 'ಹೀರೋ'ಸ್ವಾಗತ ನೀಡಲಾಗುವುದು.ಅಲ್ಲದೇ ಆತ ಕಾಮನ್‌ ವೆಲ್ತ್ ಗೇಮ್ಸ್‌ನಲ್ಲಿ ಖಂಡಿತವಾಗಿಯೂ ಚಿನ್ನದ ಪದಕವನ್ನು ಗೆಲ್ಲಲಿದ್ದಾನೆ ಎಂದು ವಿಜೇಂದರ್ ತಾಯಿ ಕೃಷ್ಣ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಆದರೂ ಸೆಮಿ ಫೈನಲ್‌ನಲ್ಲಿ ವಿಜೇಂದರ್ ಸೋತಿರುವುದು ತಮಗೆ ನಿರಾಸೆಯಾಗಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಮುಂದಿನ ಗೇಮ್ಸ್‌ನಲ್ಲಿ ಮತ್ತಷ್ಟು ಬಲಿಷ್ಠನಾಗುವಂತೆ ನಾನು ಆತನನ್ನು ತಯಾರಿಸುವುದಾಗಿ ಹೇಳಿರುವ ಕೃಷ್ಣ,ಆತನಿಗಾಗಿ ಖೀರ್ ಮತ್ತು ಕೂರ್ಮವನ್ನು ನೀಡುವ ಮೂಲಕ ದೈಹಿಕವಾಗಿ ಗಟ್ಟಿಯಾಗುವಂತೆ ಮಾಡುತ್ತೇನೆ ಎಂದು ಹೇಳಿದರು.

ಭಿವಾನಿಯ ಕಾಲೂವಾ ಹಳ್ಳಿಯಲ್ಲಿರುವ ಮನೆಯ ಹೊರಗೆ ವಿಜೇಂದರ್ ಬಾಕ್ಸಿಂಗ್ ಹಣಾಹಣಿಯ ವೀಕ್ಷಣೆಗಾಗಿ ವಿಶೇಷ ಪ್ರೊಜೆಕ್ಷನ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.ಈ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹೊಡೆದು,ವಿಜೇಂದರ್ ಹೋರಾಟವನ್ನು ವೀಕ್ಷಿಸಲು ಭಾಗವಹಿಸಿದ್ದರಂತೆ.

ವಿಜೇಂದರ್ ನಮ್ಮ ಹೀರೋ, ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿದೆ.ಆ ನಿಟ್ಟಿನಲ್ಲಿ ನಾವು ಆತನನ್ನ ಅಭಿನಂದಿಸುವುದಾಗಿ ವಿಜೇಂದರ್ ಸಹೋದರಿಯ ರಾದ ಸಂಗೀತಾ ಮತ್ತು ಪೂನಮ್ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ