ಸೋಲಿನ ನಡುವೆ ಅದೃಷ್ಟ ತಂದುಕೊಟ್ಟ ಗೆಲುವು

ಹತಾಶೆ ಒಮ್ಮೊಮ್ಮೆ ಯಶಸ್ಸನ್ನೇ ನುಂಗಿ ಬಿಡುತ್ತದೆ. ಆದರೆ ಆಕಸ್ಮಿಕವಾಗಿ ತಮ್ಮೆದುರು ನಿಲ್ಲುವ ಅದೃಷ್ಟಗಳು ನಮ್ಮ ದಿಕ್ಕನ್ನೇ ಬದಲಾಯಿಸುತ್ತದೆ. ಹೀಗೆಂದು ಅಂದವರೂ ಬೇರೆ ಯಾರೂ ಅಲ್ಲ, ವಿಶ್ವದ 12ನೇ ಶ್ರೇಯಾಂಕಿತೆ ಜೆಲೆನಾ ಜಂಕೊವಿಕ್.
PTI

ಬೆಂಗಳೂರು ಒಪನ್ ಟೆನಿಸ್ ಕೂಟದಲ್ಲಿ ಕಣಕ್ಕಿಳಿದಿರುವ ಜೆಲೆನಾ, ಒಂದು ಹಂತದಲ್ಲಿ ಟೆನಿಸ್‌ಗೆ ವಿದಾಯ ಹೇಳಬಯಸಿದ್ದರಂತೆ. 2006ರಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತು, ನಿರಾಸೆ ಅನುಭವಿಸಿದ್ದರು. ಪ್ರತಿ ಆಟದಲ್ಲೂ ಲಯ ಕಂಡುಕೊಳ್ಳಲು ಹರಸಾಹಸ ಮಾಡಬೇಕಾಗಿತ್ತು. ಹಲವು ಬಾರಿ ಉತ್ತಮ ಸರ್ವ್ ಕೊಡುವಲ್ಲಿ ಮುಗ್ಗರಿಸಿದ್ದು ಸಹಜ ಅನ್ನುತ್ತಾರೆ ಜೆಲೆನಾ.

ಆದರೆ, ಇವೆಲ್ಲವನ್ನು ಮರೆಸಿದ್ದು, ರೋಮನ್ ಓಪನ್‌ ಟೆನಿಸ್‌ನ ಮೊದಲ ಸುತ್ತಿನ ಪಂದ್ಯ. ಈಕೆಯೇ ಹೇಳುವಂತೆ ಸತತ ಸೋಲಿನ ರುಚಿಯನ್ನೇ ಕಂಡುಕೊಂಡ ತನಗೆ ಮ್ಯಾಚ್ ಪಾಯಿಂಟ್ ತಲುಪುತ್ತಿದ್ದಂತೆ ಅಚ್ಚರಿಯಾಯಿತು. ಅದನ್ನು ಕಂಡು ತನ್ನನ್ನು ತಾನೇ ಹುರಿದುಂಬಿಸಲು ಪ್ರಾರಂಭಿಸಿದೆ. ನೋಡು ನೋಡುತ್ತಿದ್ದಂತೆ ಪಂದ್ಯ ತನ್ನ ತೆಕ್ಕೆಗೆ ಬಂದಾಗ, ಒಂದು ಕ್ಷಣ ಆಶ್ಚರ್ಯ ಚಕಿತಳಾದೆ ಎಂದು ಕಣ್ಣಗಲಿಸಿ ಹೇಳುತ್ತಾರೆ.

ರೋಮ್ ಪಂದ್ಯದ ಬಳಿಕ ಮತ್ತೆ ತಿರುಗಿ ನೋಡದೆ ಒಂದೊಂದೇ ಮೆಟ್ಟಿಲನ್ನು ಏರಿದ ಜೆಲೆನಾ, ಈಗ ವಿಶ್ವದಲ್ಲಿ 12ನೇ ಸ್ಥಾನ. ಆದರೆ ಸೋಲಿನ ರುಚಿಯಿಂದ ಕಲಿತಿರುವ ಪಾಠವನ್ನು ಇಂದು ಕೂಡ ನೆನಪಲ್ಲಿ ಇಟ್ಟುಕೊಂಡಿದ್ದಾರೆ. ಇಲ್ಲವಾದರೆ, ಗೆಲುವಿನ ಸ್ವಾದವನ್ನು ಅರಿಯುವುದು ಅಸಾಧ್ಯ ಅನ್ನುವುದು ಜೆಲೆನಾ ಅಭಿಪ್ರಾಯ.

ಇನ್ನೇನಿದ್ದರೂ ನಂಬರ್ ಒನ್ ಪಟ್ಟಕ್ಕಾಗಿ ಜೆಲೆನಾ ಪ್ರಯತ್ನ. ಸರ್ಬಿಯಾದ ಪತಾಕೆಯನ್ನು ವಿಶ್ವಕ್ಕೆ ತೋರಿಸುವ ಬಯಕೆ. ತನ್ನ ಸರ್ವ್ ಹಾಗೂ ನೆಟ್ ಮುಂಭಾಗದಲ್ಲಿ ಎದುರಾಳಿಯನ್ನು ಬಗ್ಗುಬಡಿಸುವುದರ ಮೇಲೆ ಹಿಡಿತ ಸಾಧಿಸಬೇಕಾಗಿದೆ. ಇದಕ್ಕಾಗಿ ಉತ್ತಮ ತರಬೇತುದಾರರ ಹುಡುಕಾಟ ನಡೆಸಿದ್ದಾರೆ. ಅನ್ನಾ ಇವಾನೊವಿಕ್, ಜೊಕೋವಿಕ್ ಸೇರಿದಂತೆ ಸರ್ಬಿಯಾದ ಇನ್ನುಳಿದಿರುವ ಪ್ರತಿಭಾನ್ವಿತ ಆಟಗಾರ್ತಿಯರ ಮಧ್ಯೆ, ವಿಶ್ವದ ಗಮನ ಸೆಳೆದಿರುವ ಜಂಕೋವಿಕ್ ಪ್ರಕಾರ ಸರ್ಬಿಯಾದ ರಕ್ತದಲ್ಲಿಯೇ ಹೋರಾಟದ ಗುಣ ಬೆರೆತಿದೆ ಅನ್ನುತ್ತಾರೆ.