ಸ್ಸಾದಿಷ್ಟವಾದ ಸಾಮೆ (ನವಣೆ) ಅಕ್ಕಿ ಕಡುಬು

ನಾಗಶ್ರೀ

ಬುಧವಾರ, 13 ಡಿಸೆಂಬರ್ 2017 (15:48 IST)
ಸಾಮೆ ಅಕ್ಕಿಯನ್ನು ಕನ್ನಡದಲ್ಲಿ ನವಣೆ ಎಂದೂ ಕರೆಯುತ್ತಾರೆ. ಇದನ್ನು ಪ್ರಪಂಚದಲ್ಲೇ ಒಂದು ಉತ್ತಮ ಆಹಾರ ಧಾನ್ಯ ಎಂದು ಪರಿಗಣಿಸಲಾಗಿದೆ. ಸಾಮೆ ಅಕ್ಕಿ ಸಾಮಾನ್ಯ ಅಕ್ಕಿಗಿಂತ ಉತ್ತಮವಾಗಿದ್ದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತದೆ ಮತ್ತು ಅಂಟಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇಂತಹ ಸಾಮೆ ಅಕ್ಕಿಯನ್ನು ಬಳಸಿ ತುಂಬಾ ಸುಲಭವಾಗಿ ನೀವು ಕಡುಬನ್ನು ಮಾಡಬಹುದು.
ಸಾಮೆ ಅಕ್ಕಿಯ ಕಡುಬು ಮಾಡುವ ವಿಧಾನ:
 
ಬೇಕಾಗುವ ಸಾಮಗ್ರಿಗಳು:
ಸಾಮೆ ಅಕ್ಕಿ- 1 ಕಪ್
ಹೆಚ್ಚಿದ ತರಕಾರಿಗಳು - 1/2 ಕಪ್ (ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಮ್, ಪಾಲಾಕ್...)
ಕಾಯಿತುರಿ - 1/4 ಕಪ್
ಉಪ್ಪು - ರುಚಿಗೆ
ನೀರು - 1 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಎಣ್ಣೆ - 2 ಚಮಚ
ಸಾಸಿವೆ - 1/2 ಚಮಚ
ಕಡಲೆ ಬೇಳೆ - 1 ಚಮಚ
ಜೀರಿಗೆ - 1/2 ಚಮಚ
ಕರಿಬೇವು - ಸ್ವಲ್ಪ
 
ಮಾಡುವ ವಿಧಾನ:
 
* 7-8 ಗಂಟೆಗಳ ಕಾಲ ನೆನೆಸಿಟ್ಟ ಸಾಮೆ ಅಕ್ಕಿಯ ನೀರನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. 
 
* ಒಂದು ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಸ್ಟೌ ಮೇಲಿಡಿ. 2 ಚಮಚ ಎಣ್ಣೆಯನ್ನು ಹಾಕಿ, ಅದು ಸ್ವಲ್ಪ ಕಾದ ನಂತರ ಕಡಲೆ ಬೇಳೆ, ಸಾಸಿವೆ, ಜೀರಿಗೆಯನ್ನು ಹಾಕಿ. ಕಡಲೆ ಬೇಳೆ ಕೆಂಪು ಬಣ್ಣವಾಗುವವರೆಗೂ ಕೈಯಾಡಿಸುತ್ತಿರಿ. 
 
* ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಹೆಚ್ಚಿದ ತರಕಾರಿಗಳು ಮತ್ತು ಕಾಯಿತುರಿಯನ್ನು ಸೇರಿಸಿ. ತರಕಾರಿಗಳು ಸ್ವಲ್ಪ ಬೆಂದ ನಂತರ ಅದಕ್ಕೆ ಈ ಮೊದಲೇ ರುಬ್ಬಿಟ್ಟುಕೊಂಡ ಸಾಮೆ ಅಕ್ಕಿ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣ ಬೇಯಲು ಅಗತ್ಯವಿರುವಷ್ಟು ನೀರನ್ನು ಸೇರಿಸಿ. ನೀರು ಆವಿಯಾಗುವವರೆಗೂ ಕೈಯಾಡಿಸುತ್ತಿದ್ದು ನಂತರ ಸ್ಟೌ ಆಫ್ ಮಾಡಿ.
 
* ಈ ಮೇಲೆ ಮಾಡಿರುವ ಮಿಶ್ರಣ ಬಿಸಿ ಆರುವ ಮೊದಲೇ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ. ಈ ಉಂಡೆಗಳನ್ನು ಇಡ್ಲಿ ಕುಕ್ಕರ್‌ನಲ್ಲಿ 15-20 ನಿಮಿಷಗಳ ಕಾಲ ಬೇಯಿಸಿದರೆ ಸಾಮೆ ಅಕ್ಕಿ ಕಡುಬು ರೆಡಿ. ಇದು ಕೊತ್ತಂಬರಿ ಸೊಪ್ಪಿನ ಕಾಯಿ ಚಟ್ನಿಯೊಂದಿಗೆ ತುಂಬಾ ರುಚಿಕರವಾಗಿರುತ್ತದೆ.
 
ಹೀಗೆ ಸಾಮೆ ಅಕ್ಕಿಯೊಂದಿಗೆ ತರಕಾರಿಗಳನ್ನು ಬಳಸಿ, ಹೆಚ್ಚು ಎಣ್ಣೆಯನ್ನು ಬಳಸದೇ ಸುಲಭವಾಗಿ ಮಾಡಬಹುದಾದ ಈ ಕಡುಬು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗೂ ರುಚಿಕರವೂ ಆಗಿದೆ. ನೀವೂ ಇದನ್ನೊಮ್ಮೆ ಪ್ರಯತ್ನಿಸಬಹುದು ಅಲ್ಲವೇ...!!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ