ದೀಪಾವಳಿಯಲ್ಲಿ ಕಣ್ಣಿಗಲ್ಲದೆ ಬಾಯಿಗೂ ಹಬ್ಬ

ಮಂಗಳವಾರ, 26 ಅಕ್ಟೋಬರ್ 2021 (14:35 IST)
ದೀಪಾವಳಿ ಹಬ್ಬದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಕಾಯಿ ಕಡುಬು ಮಾಡುವುದು ಪದ್ಧತಿ.
ಬೆಳಕಿನ ಹಬ್ಬದಲ್ಲಿ ಈ ರುಚಿಕರವಾದ ಸಿಹಿ ಕಡುಬು ಸವಿಯುವುದೇ ಒಂದು ವಿಶೇಷ. ಕಾಯಿ ಕಡುಬು ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಗ್ರಿ
* ನೆನೆಸಿದ ಅಕ್ಕಿ-2 ಕಪ್
* ಕಾಯಿತುರಿ -2 ಕಪ್
* ಬೆಲ್ಲ- 1 ಕಪ್
* ಏಲಕ್ಕಿ -ಸ್ವಲ್ಪ
* ಚೌಕಾಕಾರದಲ್ಲಿ ಕತ್ತರಿಸಿ ಬಾಡಿಸಿಟ್ಟ ಬಾಳೆ ಎಲೆ-8 ರಿಂದ 10
ಮಾಡುವ ವಿಧಾನ
ಮೊದಲಿಗೆ ನೆನೆಹಾಕಿಟ್ಟ ಅಕ್ಕಿಯನ್ನು ತೆಳುವಾಗಿ, ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ದಪ್ಪ ತಳದ ಪಾತ್ರೆಗೆ ರುಬ್ಬಿದ ಹಿಟ್ಟು, ಅರ್ಧಕಪ್ ಬೆಲ್ಲ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು.
ಪ್ರತ್ಯೇಕವಾಗಿ ಕಾಯಿತುರಿ, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಹೂರಣ ಸಿದ್ಧಪಡಿಸಿಕೊಳ್ಳಬೇಕು.
ಬಳಿಕ ಕಾಯಿಸಿಟ್ಟ ಹಿಟ್ಟನ್ನು ಬಾಡಿಸಿದ ಬಾಳೆ ಎಲೆ ಮಧ್ಯ ಭಾಗಕ್ಕೆ ತೆಳ್ಳನೆ ಲೇಪನ ಮಾಡಿ, ಅದರ ಮೇಲೆ ಹೂರಣವನ್ನು ಹರಡಿ. ಈಗ ಬಾಳೆ ಎಲೆಯ ನಾಲ್ಕು ಭಾಗಗಳನ್ನು ಮುಚ್ಚಿ ಉಗಿಯಲ್ಲಿ ಅರ್ಧಗಂಟೆ ಬೇಯಿಸಿ. ಕಡುಬು ರೆಡಿಯಾದ ಬಳಿಕ ಬಾಳೆ ಎಲೆ ಬಿಡಿಸಿ. ತುಪ್ಪದೊಂದಿಗೆ ಕಾಯಿ ಕಡುಬು ಸವಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ