ಹಲಸಿನ ಹಣ್ಣಿನ ಸಿಹಿ ಸಿಹಿಯಾದ ಖಾದ್ಯಗಳು

ಸೋಮವಾರ, 17 ಸೆಪ್ಟಂಬರ್ 2018 (18:56 IST)
ಹಲಸಿನ ಹಣ್ಣಿನ ಹೆಸರನ್ನು ಕೇಳಿದರೇ ಬಾಯಲ್ಲಿ ನೀರೂರಿಸುತ್ತದೆ. ಹಲಸಿನ ಹಣ್ಣಿನ ತೊಳೆಯನ್ನು ಹಾಗೆಯೇ  ತಿಂದರೂ ಅಥವಾ ಅದರಿಂದ ಖಾದ್ಯಗಳನ್ನು ಮಾಡಿಕೊಂಡು ತಿಂದರೂ ಹಲಸಿನ ಹಣ್ಣಿನ ರುಚಿಗೆ ಸಾಟಿಯೇ ಇಲ್ಲ. ಮಲೆನಾಡುಗಳಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಹಾಗಾದರೆ ನಾವೂ ಸಹ ಹಲಸಿನ ಹಣ್ಣಿನ ಬಗೆ ಬಗೆಯ ಖಾದ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಒಮ್ಮೆ ಟ್ರೈ ಮಾಡಿ ನೋಡಿ..
1. ಹಲಸಿನ ಹಣ್ಣಿನ ಇಡ್ಲಿ:
 
ಬೇಕಾಗುವ ಸಾಮಗ್ರಿಗಳು:
 
ಹಲಸಿನ ಹಣ್ಣಿನ ತೊಳೆ 2 ರಿಂದ 3 ಕಪ್
ಅಕ್ಕಿ ತರಿ 1 ಕಪ್
ಬೆಲ್ಲ ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
1 ಚಿಟಿಕೆ ಏಲಕ್ಕಿ ಪುಡಿ
ಮಾಡುವ ವಿಧಾನ:
ಮೊದಲು ಬೀಜಗಳಿಂದ ಬೇರ್ಪಡಿಸಿದ ಹಲಸಿನ ಹಣ್ಣಿನ ತೊಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅಕ್ಕಿ ತರಿಯನ್ನು ಈ ಹಲಸಿನ ಹಣ್ಣಿನ ಜೊತೆ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಆದರೆ ಈ ಮಿಶ್ರಣವು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಇರಬೇಕು. ನಂತರ ಕಲೆಸಿದ ಹಿಟ್ಟನ್ನು 10 ರಿಂದ 20 ನಿಮಿಷ ಹಾಗೆಯೇ ಬಿಟ್ಟು ಆಮೇಲೆ ಇಡ್ಲಿ ಪಾತ್ರೆಯಲ್ಲಿ ಕಲೆಸಿದ ಹಲಸಿನ ಹಣ್ಣಿನ ಹಿಟ್ಟನ್ನು ಎಣ್ಣೆ ಸವರಿ ಇಡ್ಲಿ ಪಾತ್ರೆಯಲ್ಲಿ ಹಾಕಿ ಸುಮಾರು 30 ನಿಮಿಷಗಳ ಕಾಲ ಬೇಯಿಸಬೇಕು. ಆದರೆ ಇದನ್ನು ಬಾಳೆಎಲೆಯಲ್ಲಿ ಮಾಡಿದರೆ ಕನಿಷ್ಠ ಅಂದರೂ 1 ಗಂಟೆ ಬೇಯಿಸಬೇಕು. ಆಗ ರುಚಿಯಾದ ಹಲಸಿನ ಹಣ್ಣಿನ ಇಡ್ಲಿ ಸವಿಯಲು ಸಿದ್ಧ. ಈ ಇಡ್ಲಿಯನ್ನು ತುಪ್ಪದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
 
2. ಹಲಸಿನ ಹಣ್ಣಿನ ಪಾಯಸ:
 
 ಬೇಕಾಗುವ ಸಾಮಗ್ರಿಗಳು:
 
ಹಲಸಿನ ತೊಳೆ 2 ಕಪ್
ತೆಂಗಿನಕಾಯಿ 1
ಬೆಲ್ಲ 1 ಅಥವಾ ಅರ್ಧ ಕಪ್
ಗೋಡಂಬಿ 10
ದ್ರಾಕ್ಷಿ 10
ಏಲಕ್ಕಿ 5
ತುಪ್ಪ 2 ಚಮಚ
 
ಮಾಡುವ ವಿಧಾನ:
 
ಒಂದು ಪಾತ್ರೆಗೆ 2 ಕಪ್ ನೀರು ಹಾಕಿ ಬಿಸಿ ಮಾಡಿ ಹಲಸಿನ ತೊಳೆಯನ್ನು ಹಾಕಿ ಬೇಯಿಸಬೇಕು. ನಂತರ ತುರಿದ ತೆಂಗಿನಕಾಯಿಯ ಹಾಲು ತೆಗೆದು 2 ಕಪ್ ಹಾಲು ಮತ್ತು 2 ಕಪ್ ತೆಳ್ಳನೆಯ ಹಾಲನ್ನು ಮಾಡಿಟ್ಟುಕೊಳ್ಳಬೇಕು. ನಂತರ ಹಲಸಿನ ತೊಳೆ ಚೆನ್ನಾಗಿ ಬೆಂದ ನಂತರ ಬೆಲ್ಲವನ್ನು ಹಾಕಿ ಕುದಿಸಬೇಕು. ಬಳಿಕ ತೆಂಗಿನ ಹಾಲು ಬೆರೆಸಿ 20 ನಿಮಿಷ ಕುದಿಯಲು ಬಿಡಬೇಕು.
 
ನಂತರ ಹಲಸಿನ ತೊಳೆ, ಬೆಲ್ಲ ಮತ್ತು ಹಾಲಿನ ಮಿಶ್ರಣ ಕುದಿದು ಪರಿಮಳ ಬರುವಾಗ ತೆಂಗಿನಕಾಯಿಯ ಗಟ್ಟಿ ಹಾಲು ಮತ್ತು ಏಲಕ್ಕಿ ಪುಡಿ ಬೆರೆಸಿ ಒಂದು ಸಲ ತಿರುವಬೇಕು. ನಂತರ ಈ ಮಿಶ್ರಣಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿದರೆ ಇನ್ನೂ ಟೇಸ್ಟಿಯಾಗಿರುತ್ತದೆ. ಮತ್ತು ತೆಂಗಿನ ಕಾಯಿ ಹಾಲನ್ನು ಜಾಸ್ತಿ ಹಾಕಿದಷ್ಟು ಪಾಯಸದ ರುಚಿ ಜಾಸ್ತಿಯಾಗುತ್ತದೆ. 
3. ಹಲಸಿನ ಹಣ್ಣಿನ ಚಾಕಲೇಟ್:
 
ಬೇಕಾಗುವ ಸಾಮಗ್ರಿಗಳು:
 
ಹಲಸಿನ ಹಣ್ಣಿನ ತೊಳೆ 1 ಕಪ್
ಸಕ್ಕರೆ 1 ಕಪ್
ತೆಂಗಿನ ತುರಿ 1/4 ಕಪ್
ಗೋಧಿ ಪುಡಿ 1/4 ಕಪ್
ಶುಂಠಿ ಪುಡಿ 1/2 ಚಮಚ
ಕಾಳು ಮೆಣಸಿನ ಪುಡಿ 1/4 ಚಮಚ
ತುಪ್ಪ 1 ಚಮಚ
ಗೋಡಂಬಿ ಸ್ವಲ್ಪ
 
ಮಾಡುವ ವಿಧಾನ:
 
ಹಲಸಿನ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ರುಬ್ಬಿದ ಹಣ್ಣಿನ ಮಿಶ್ರಣವನ್ನು ಹಾಕಬೇಕು. ಈ ಹಣ್ಣಿನ ಮಿಶ್ರಣವು ಬೇಯುವವರೆಗೆ ತೊಳೆಸುತ್ತಾ ಇರಬೇಕು. ನಂತರ ಇದಕ್ಕೆ ತೆಂಗಿನತುರಿ ಮತ್ತು ಸಕ್ಕರೆ ಹಾಕಿ ತೊಳೆಸಬೇಕು. ಸಕ್ಕರೆ ಕರಗಿ ನೀರಾದ ಮೇಲೆ ಗೋಧಿ ಪುಡಿಯನ್ನು ಹಾಕಿ ಮಿಶ್ರಣ ಗಟ್ಟಿ ಆಗುವವರೆಗೂ ಸರಿಯಾಗಿ ತೊಳೆಸುತ್ತಾ ಇರಬೇಕು. ನಂತರ ಶುಂಠಿ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ತೊಳೆಸಬೇಕು. ಬಾಣಲೆಯನ್ನು ತಳ ಬಿಡುವ ತನಕ ಕಾಯಿಸಿ ನಂತರ ಒಲೆಯಿಂದ ಕೆಳಗಿಳಿಸಬೇಕು. ನಂತರ ತಟ್ಟೆಗೆ ತುಪ್ಪ ಸವರಿ ಸಣ್ಣ ಸಣ್ಣ ಚಾಕೊಲೇಟ್ ಹದಕ್ಕೆ ಅಥವಾ ಚಪ್ಪಟೆ ಮಾಡಿ ತಟ್ಟೆಯಲ್ಲಿ ಹಾಕಬೇಕು. ಅದು ಆರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟರೆ ರುಚಿಯಾದ ಹಲಸಿನ ಹಣ್ಣಿನ ಚಾಕೊಲೇಟ್ ಸವಿಯಲು ಸಿದ್ಧ.
 
4. ಹಲಸಿನ ಹಣ್ಣಿನ ಐಸ್‌ಕ್ರೀಮ್:
 
ಬೇಕಾಗುವ ಸಾಮಗ್ರಿಗಳು:
 
ಹಲಸಿನ ಹಣ್ಣು 1 ಕಪ್
ಹಾಲು 2 ಕಪ್
ಕೋವಾ ಹಿಟ್ಟು 2 ಚಮಚ
ಸಕ್ಕರೆ 1 ಕಪ್
 
ಮಾಡುವ ವಿಧಾನ:
 
ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಕೋವಾ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ಅದು ತಣ್ಣಗಾದ ನಂತರ 1/2 ಕಪ್ ಹಾಲಲ್ಲಿ ಹಾಕಿ ಅದು ಗಂಟಾಗದಂತೆ ತೊಳೆಸಬೇಕು. ನಂತರ ಬಾಣಲೆಗೆ ಹಾಲನ್ನು ಹಾಕಿ ಕುದಿಸಬೇಕು. ನಂತರ ಸಕ್ಕರೆ ಹಾಗೂ ಕೋವಾ ಮಿಶ್ರಣಕ್ಕೆ ಇದನ್ನು ಹಾಕಿ ಕುದಿಸಬೇಕು. ಮಿಶ್ರಣವು ದಪ್ಪವಾದಾಗ ಕೆಳಗಿಳಿಸಬೇಕು. ನಂತರ ಹಲಸಿನ ಹಣ್ಣನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಹಾಲಿನ ಮಿಶ್ರಣಕ್ಕೆ ಇದನ್ನು ಸೇರಿಸಿ ತಣ್ಣಗಾಗಲು ಬಿಡಬೇಕು. ಇದು ಚೆನ್ನಾಗಿ ಆರಿದ ನಂತರ ಈ ಮಿಶ್ರಣವನ್ನು ಫ್ರಿಝರ್‌ನಲ್ಲಿ ಇಡಬೇಕು. 1 ಗಂಟೆಯ ನಂತರ ಐಸ್‌ಕ್ರೀಮ್ ಗಟ್ಟಿಯಾಗುತ್ತದೆ. ಆಗ ಸೌಟಿನಿಂದ ಒಮ್ಮೆ ಚೆನ್ನಾಗಿ ತೊಳೆಸಿ ಮತ್ತೆ ಫ್ರೀಝರ್‌ನಲ್ಲಿ 2 ರಿಂದ 3 ಗಂಟೆ ಇಟ್ಟು ಹೊರ ತೆಗೆದರೆ ರುಚಿಯಾದ ಹಲಸಿನ ಹಣ್ಣಿನ ಐಸ್‌ಕ್ರೀಮ್ ಸವಿಯಲು ಸಿದ್ಧ.
 
5. ಹಲಸಿನ ಹಣ್ಣಿನ ಪೇಡಾ
 
ಬೇಕಾಗುವ ಸಾಮಗ್ರಿಗಳು:
 
ನುಣ್ಣಗೆ ರುಬ್ಬಿದ ಹಲಸಿನ ಹಣ್ಣಿನ ಪೇಸ್ಟ್ 1 ಕಪ್
ಸಕ್ಕರೆ 1 ಕಪ್
ಸಕ್ಕರೆ ಪುಡಿ 1/2 ಕಪ್
 
ಮಾಡುವ ವಿಧಾನ:
 
ಮೊದಲು ಹಲಸಿನ ಹಣ್ಣನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. 1 ಬಾಣಲೆಗೆ ಈ ಹಲಸಿನ ಮಿಶ್ರಣವನ್ನು ಹಾಕಿ ಅದಕ್ಕೆ ಸಕ್ಕರೆಯನ್ನು ಹಾಕಬೇಕು. ಸಣ್ಣ ಉರಿಯಲ್ಲಿಟ್ಟು ಮಿಶ್ರಣವು ತಳ ಹಿಡಿಯದಂತೆ ಸೌಟಿನಿಂದ ತೊಳೆಸುತ್ತಿರಬೇಕು. ಅದು ಬೆಂದು ಮುದ್ದೆಯಾದಾಗ ತಳ ಬಿಡುತ್ತಾ ಬಂದಾಗ ಒಲೆಯಿಂದ ಇಳಿಸಬೇಕು. ನಂತರ ಉಂಡೆಗಳನ್ನು ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಿಸಿ ಇಡಿ. ಈಗ ರುಚಿಯಾದ ಪೇಡಾ ಸವಿಸಲು ಸಿದ್ಧ... 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ