ನವರಾತ್ರಿಗೆ ವಿಶೇಷವಾದ ದಿಢೀರ್ ಸಿಹಿ ತಿಂಡಿಗಳು..!!

ಸೋಮವಾರ, 15 ಅಕ್ಟೋಬರ್ 2018 (18:13 IST)
ನವರಾತ್ರಿ ಹಬ್ಬ ಪ್ರಾರಂಭವಾದರೆ ಸಿಹಿ ತಿಂಡಿಗಳದೇ ಹಾವಳಿಯಿರುತ್ತದೆ. ದಿನಾ ಒಂದೊಂದು ಬಗೆಯ ಸಿಹಿ ತಿಂಡಿಗಳು. ಈ ದಿನಗಳಲ್ಲಿ ಮಕ್ಕಳಿಗೂ ಸಹ ದಸರಾ ರಜೆಯಿರುತ್ತದೆ. ಹಾಗಾಗಿ ಮಹಿಳೆಯರು ಈ ದಿನಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಾರೆ. ಹಬ್ಬದ ಸಮಯದಲ್ಲಿ ಎಲ್ಲರೂ ಒಂದೆಡೆ ಸೇರುವುದರಿಂದ ಅಧಿಕ ಕೆಲಸಗಳಿರುತ್ತವೆ. ಹಾಗಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ರುಚಿಯಾದ ಸಿಹಿ ತಿಂಡಿಗಳನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
1.ಮಾಲ್ಪುವಾ
 
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು - 1 ಕಪ್
ಮಿಲ್ಕ್ ಪೌಡರ್ - 1/2 ಕಪ್
ರವಾ - 2-3 ಚಮಚ
ಸೋಂಪಿನ ಪುಡಿ - 1/2 ಚಮಚ
ಹಾಲು - 1 ಕಪ್
ಸಕ್ಕರೆ - 1 ಕಪ್
ಏಲಕ್ಕಿ ಪುಡಿ - 1/2 ಚಮಚ
ಎಣ್ಣೆ - ಕರಿಯಲು
ಡ್ರೈ ಫ್ರುಟ್ಸ್ - ಸ್ವಲ್ಪ
 
ಮಾಡುವ ವಿಧಾನ:
ಒಂದು ಬೌಲ್‌ಗೆ ಮೈದಾ, ಹಾಲಿನ ಪುಡಿ, ಸೋಂಪಿನ ಪುಡಿ, ರವಾ ಮತ್ತು ಹಾಲನ್ನು ಮೇಲೆ ಹೇಳಿರುವ ಅಳತೆಯಲ್ಲಿ ಹಾಕಿ ಚೆನ್ನಾಗಿ ಗಂಟಾಗದಂತೆ ಮಿಕ್ಸ್ ಮಾಡಿ. ಈ ಹಿಟ್ಟು ದಪ್ಪವಾಗಿ ದೋಸೆ ಹಿಟ್ಟಿನ ಹದದಲ್ಲಿ ಇರಬೇಕು. ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲನ್ನು ಸೇರಿಸಿಕೊಳ್ಳಬಹುದು. ಹೀಗೆ ತಯಾರಿಸಿದ ಹಿಟ್ಟನ್ನು 30 ನಿಮಿಷ ಹಾಗೆಯೇ ಬಿಡಿ.
 
ಈಗ ಒಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ ಮತ್ತು 1/2 ಕಪ್ ನೀರನ್ನು ಹಾಕಿ ಕುದಿಸಿ. ಸಕ್ಕರೆಯು ಕರಗಿದ ನಂತರ 5 ನಿಮಿಷ ಚೆನ್ನಾಗಿ ಕುದಿಸಿ ಏಲಕ್ಕಿ ಪುಡಿಯನ್ನು ಬೆರೆಸಿ ಸ್ಟೌ ಆಫ್ ಮಾಡಿ ಸಕ್ಕರೆ ಪಾಕವನ್ನು ಮುಚ್ಚಿಡಿ. ಈಗ ಒಂದು ಪ್ಯಾನ್‌ನಲ್ಲಿ ಅರ್ಧದಷ್ಟು ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಎಣ್ಣೆಯು ಕಾದ ನಂತರ ಈಗಾಗಲೇ ತಯಾರಿಸಿಟ್ಟ ಹಿಟ್ಟನ್ನು ಇನ್ನೊಮ್ಮೆ ಮಿಕ್ಸ್ ಮಾಡಿಕೊಂಡು ಒಂದು ಸೌಟಿನಷ್ಟು ಹಿಟ್ಟನ್ನು ಅದರಲ್ಲಿ ಹಾಕಿ. ಒಂದು ನಿಮಿಷ ಚಿಕ್ಕ ಉರಿಯಲ್ಲಿ ಬೇಯಿಸಿದ ನಂತರ ಅದನ್ನು ತಿರುವಿ ಹಾಕಿ ಬೇಯಿಸಿ ತೆಗೆಯಿರಿ. ನಂತರ ಅವುಗಳನ್ನು ಈಗಾಗಲೇ ತಯಾರಿಸಿಟ್ಟ ಸಕ್ಕರೆ ಪಾಕದಲ್ಲಿ ಚೆನ್ನಾಗಿ ಅದ್ದಿ ತೆಗೆದು ಅವುಗಳ ಮೇಲೆ ಡ್ರೈ ಫ್ರೂಟ್ಸ್ ಚೂರುಗಳನ್ನು ಹಾಕಿದರೆ ರುಚಿಯಾದ ಮಾಲ್ಪುವಾ ಸವಿಯಲು ಸಿದ್ಧವಾಗುತ್ತದೆ.
 
2.ರವಾ ಬರ್ಫಿ
 
ಬೇಕಾಗುವ ಸಾಮಗ್ರಿಗಳು:
ರವಾ - 1 ಕಪ್
ತುಪ್ಪ - 1/4 ಕಪ್
ಕಾಯಿತುರಿ - 1/4 ಕಪ್
ಹಾಲು - 2 1/2 ಕಪ್
ಸಕ್ಕರೆ - 1 ಕಪ್
ಬಾದಾಮಿ - ಒಂದು ಹಿಡಿ
ಗೋಡಂಬಿ - ಒಂದು ಹಿಡಿ
ಏಲಕ್ಕಿ ಪುಡಿ - 1/2 ಚಮಚ
 
ಮಾಡುವ ವಿಧಾನ:
ಒಂದು ಪ್ಯಾನ್‌ಗೆ 1/4 ಕಪ್ ತುಪ್ಪ ಮತ್ತು ರವೆಯನ್ನು ಹಾಕಿ ಚಿಕ್ಕ ಉರಿಯಲ್ಲಿ 5 ನಿಮಿಷ ಹುರಿಯಿರಿ. ರವೆ ಹುರಿದ ಪರಿಮಳ ಬರುತ್ತಿದ್ದಂತೆಯೇ ಕಾಯಿ ತುರಿಯನ್ನು ಹಾಕಿ 2 ನಿಮಿಷ ಹುರಿದು ಅದನ್ನು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. ಈಗ ಅದೇ ಪ್ಯಾನ್‌ನಲ್ಲಿ ಹಾಲನ್ನು ಹಾಕಿ ಕುದಿಸಿ. ಹಾಲನ್ನು ಕುದಿಸುವಾಗ ಆಗಾಗ ಕೈಯಾಡಿಸುತ್ತಿರಿ. ಹಾಲನ್ನು ಚೆನ್ನಾಗಿ ಕುದಿಸಿದ ನಂತರ ಈಗಾಗಲೇ ಹುರಿದಿಟ್ಟ ರವೆಯನ್ನು ಹಾಕಿ ಗಂಟುಗಳಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ರವೆ ಹಾಲನ್ನು ಹೀರಿಕೊಂಡು ಚೆನ್ನಾಗಿ ಬೆಂದು ತಳವನ್ನು ಬಿಡುವವರೆಗೂ ನಿರಂತರವಾಗಿ ಮಿಕ್ಸ್ ಮಾಡುತ್ತಿರಿ.
 
ಈಗ ಇದಕ್ಕೆ ಸಕ್ಕರೆ, ತರಿತರಿಯಾಗಿ ರುಬ್ಬಿಕೊಂಡ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆಯು ಕರಗಿ ಚೆನ್ನಾಗಿ ಹೊಂದಿಕೊಂಡ ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣ ಪ್ಯಾನ್‌ನ ತಳವನ್ನು ಸಂಪೂರ್ಣವಾಗಿ ಬಿಟ್ಟು ಗಟ್ಟಿಯಾಗುವವರೆಗೆ ಕೈಯಾಡಿಸಿ ನಂತರ ಸ್ಟೌ ಆಫ್ ಮಾಡಿ. ಈ ಮಿಶ್ರಣವನ್ನು ಒಂದು ಪ್ಲೇಟ್‌ನಲ್ಲಿ ಹಾಕಿ ಸಮತಟ್ಟಾಗಿಸಿ. ನಂತರ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಅದರ ಮೇಲೆ ಬೀರಿ ಪ್ರೆಸ್ ಮಾಡಿ. 5 ನಿಮಿಷ ಬಿಟ್ಟು ಅದನ್ನು ನಿಮಗೆ ಬೇಕಾದ ಆಕಾರ ಮತ್ತು ಗಾತ್ರದಲ್ಲಿ ಕಟ್ ಮಾಡಿಕೊಂಡರೆ ರವಾ ಬರ್ಫಿ ರೆಡಿಯಾಗುತ್ತದೆ.
 
3.ಗೋಧಿ ಹಲ್ವಾ
 
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 1 ಕಪ್
ತುಪ್ಪ - 1 ಕಪ್
ಸಕ್ಕರೆ - 1 ಕಪ್
ಏಲಕ್ಕಿ ಪುಡಿ - 1/2 ಚಮಚ
ಬಾದಾಮಿ ಮತ್ತು ಗೋಡಂಬಿ - ಸ್ವಲ್ಪ
 
ಮಾಡುವ ವಿಧಾನ:
ಒಂದು ಪ್ಯಾನ್‌ಗೆ ತುಪ್ಪವನ್ನು ಹಾಕಿ ಬಿಸಿಯಾದ ನಂತರ ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ. ಅದು ಸೀದು ಹೋಗಲು ಬಿಡದಂತೆ ಸಣ್ಣ ಉರಿಯಲ್ಲಿ ನಿರಂತರವಾಗಿ ಕೈಯಾಡಿಸುತ್ತಲೇ ಇರಿ. ಹಿಟ್ಟು ಕಂದು ಬಂಗಾರದ ಬಣ್ಣಕ್ಕೆ ಬರುವವರೆಗೆ ಕಾಯಬೇಕು. ಇದರೊಂದಿಗೆ ಇನ್ನೊಂದು ಪ್ಯಾನ್‌ನಲ್ಲಿ 1 ಕಪ್ ಸಕ್ಕರೆ ಮತ್ತು 3 ಕಪ್ ನೀರನ್ನು ಹಾಕಿ 5 ನಿಮಿಷ ಕುದಿಸಿ. ಹಿಟ್ಟು ಬಂಗಾರದ ಬಣ್ಣಕ್ಕೆ ಬಂದಾಗ ಹಿಟ್ಟಿನಲ್ಲಿ ನಿರಂತರವಾಗಿ ಕೈಯಾಡಿಸುತ್ತಾ ಈ ಪಾಕವನ್ನು ಅದಕ್ಕೆ ಸೇರಿಸುತ್ತಾ ಬರಬೇಕು. ನಿರಂತರವಾಗಿ ಕೈಯಾಡಿಸುತಲೇ ಇರಬೇಕು. ಹಿಟ್ಟು ಪಾಕವನ್ನು ಸಂಪೂರ್ಣವಾಗಿ ಹೀರಿ ದಪ್ಪವಾಗುತ್ತಾ ಬರುತ್ತದೆ. ಸುಮಾರು 5 ನಿಮಿಷಗಳವರೆಗೆ ಹೀಗೆಯೇ ಚಿಕ್ಕ ಉರಿಯಲ್ಲಿ ಬೇಯಿಸಬೇಕು. ನಂತರ ಆ ಮಿಶ್ರಣವು ತಳವನ್ನು ಬಿಡುತ್ತದೆ ಮತ್ತು ತುಪ್ಪವನ್ನು ಬಿಡಲು ಪ್ರಾರಂಭಿಸುತ್ತದೆ. ಆಗ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿದರೆ ರುಚಿಯಾದ ಗೋಧಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ