ವಿವಿಧ ರೀತಿಯ ಚಟ್ನಿ ಪುಡಿಗಳು ತಿನ್ನಲು ರುಚಿಕರ

ನಾಗಶ್ರೀ ಭಟ್

ಶುಕ್ರವಾರ, 29 ಡಿಸೆಂಬರ್ 2017 (12:05 IST)
ದಕ್ಷಿಣ ಭಾರತ ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸುವ ವಿವಿಧ ರೀತಿಯ ಚಟ್ನಿ ಪುಡಿಗಳು ತಿನ್ನಲು ರುಚಿಕರವಾಗಿರುತ್ತವೆ ಅಲ್ಲದೇ ಇವು ಬಹಳಷ್ಟು ದಿನಗಳವರೆಗೆ ಕೆಡದಂತೆಯು ಇಡಬಹುದು ಇವನ್ನು ರಾತ್ರಿ ಊಟಕ್ಕೆ ಇಲ್ಲವೇ ಬೆಳಗಿನ ತಿಂಡಿಗಳ ಜೊತೆಯು ಇದನ್ನು ಬಳಸಬಹುದು. ಅದನ್ನು ತಯಾರಿಸುವ ಕುರಿತು ತಿಳಿಯುವ ಕೂತುಹಲ ನಿಮಗಿದ್ದಲ್ಲಿ ಈ ವರದಿಯನ್ನು ಓದಿ.
 
1. ಶೇಂಗಾ ಚಟ್ನಿ ಪುಡಿ:

 
ಬೇಕಾಗುವ ಸಾಮಗ್ರಿಗಳು:
 
ಒಣಮೆಣಸು - 8-10
ಕಡಲೆ ಬೇಳೆ - 1/4 ಕಪ್
ಶೇಂಗಾ - 1/2 ಕಪ್
ಉದ್ದಿನ ಬೇಳೆ - 1/4 ಕಪ್
ಕೊಬ್ಬರಿ ತುರಿ - 1/4 ಕಪ್
ಇಂಗು - 1/2 ಚಮಚ
ಕರಿಬೇವು - 1 ಹಿಡಿ
ಹುಳಿಪುಡಿ - 2-3 ಚಮಚ
ಸಕ್ಕರೆ - 1 ಚಮಚ
ಎಣ್ಣೆ - 2 ಚಮಚ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
* ಕೊಬ್ಬರಿ ತುರಿ, ಶೇಂಗಾ, ಕಡಲೆ ಬೇಳೆ ಮತ್ತು ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಒಂದು ಪ್ಯಾನ್‌ಗೆ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಮೆಣಸು ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. ಅದು ಹುರಿದಾಗ ಅದಕ್ಕೆ ಇಂಗು ಮತ್ತು ಹುಳಿ ಪುಡಿಯನ್ನು ಸೇರಿಸಿ ತದನಂತರ ಇದಕ್ಕೆ ಮೊದಲೇ ಹುರಿದಿಟ್ಟ ಕೊಬ್ಬರಿ ತುರಿ, ಶೇಂಗಾ, ಕಡಲೆ ಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ ಅದಕ್ಕೆ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಹುರಿದ ಪದಾರ್ಥಗಳು ತಣ್ಣಗಾದ ನಂತರ ಅದನ್ನೆಲ್ಲಾ  ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ ರುಚಿಯಾದ ಶೇಂಗಾ ಚಟ್ನಿ ಪುಡಿ ರೆಡಿ.
 
2. ಕೊಬ್ಬರಿ ಚಟ್ನಿ ಪುಡಿ.
ಬೇಕಾಗುವ ಸಾಮಗ್ರಿಗಳು:
 
ಕೊಬ್ಬರಿ ತುರಿ - 1 ಕಪ್
ಒಣಮೆಣಸು - 8-10
ಕಡಲೆ ಬೇಳೆ - 4-5 ಚಮಚ
ಉದ್ದಿನ ಬೇಳೆ - 2-3 ಚಮಚ
ಇಂಗು - 1/2 ಚಮಚ
ಕರಿಬೇವು - 1 ಹಿಡಿ
ಹುಳಿಪುಡಿ(ಹುಣಿಸೆ ಹಣ್ಣು) - 2-3 ಚಮಚ
ಸಕ್ಕರೆ - 1 ಚಮಚ
ಎಣ್ಣೆ - 2 ಚಮಚ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
* ಕೊಬ್ಬರಿ ತುರಿಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಒಂದು ಪ್ಯಾನ್‌ಗೆ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಕಡಲೆ ಬೇಳೆ ಮತ್ತು ಉದ್ದಿನ ಬೇಳೆಯನ್ನು ಹಾಕಿ ಹುರಿದು ನಂತರ ಮೆಣಸು ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. ಹುರಿದಾದ ನಂತರ ಅದಕ್ಕೆ ಇಂಗು ಮತ್ತು ಹುಳಿ ಪುಡಿ ಅಥವಾ ಹುಣಿಸೆ ಹಣ್ಣನ್ನು ಸೇರಿಸಿ. ತದನಂತರ ಅದಕ್ಕೆ ಮೊದಲೇ ಹುರಿದಿಟ್ಟ ಕೊಬ್ಬರಿ ತುರಿಯನ್ನು ಸೇರಿಸಿ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ ರುಚಿಯಾದ ಕೊಬ್ಬರಿ ಚಟ್ನಿ ಪುಡಿ ರೆಡಿ.
 
3. ಬೆಳ್ಳುಳ್ಳಿ ಚಟ್ನಿ ಪುಡಿ:
ಬೇಕಾಗುವ ಸಾಮಗ್ರಿಗಳು:
 
ಕೊಬ್ಬರಿ ತುರಿ - 1/2 ಕಪ್
ಬೆಳ್ಳುಳ್ಳಿ ಎಸಳು - 1/4 ಕಪ್
ಒಣಮೆಣಸು - 8-10
ಕಡಲೆ ಬೇಳೆ - 4-5 ಚಮಚ
ಉದ್ದಿನ ಬೇಳೆ - 2-3 ಚಮಚ
ಇಂಗು - 1/2 ಚಮಚ
ಕರಿಬೇವು - 1/4 ಕಪ್
ಹುಣಿಸೆ ಹಣ್ಣು - ಸ್ವಲ್ಪ
ಎಣ್ಣೆ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
 
ಮಾಡುವ ವಿಧಾನ:
 
* ಕೊಬ್ಬರಿ ತುರಿ, ಬೆಳ್ಳುಳ್ಳಿ, ಮತ್ತು ಕರಿಬೇವನ್ನು ಬೇರೆ ಬೇರೆಯಾಗಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಕಡಲೆ ಬೇಳೆ, ಉದ್ದಿನ ಬೇಳೆಯನ್ನು ಹಾಕಿ ಹುರಿದು ನಂತರ ಮೆಣಸನ್ನು ಹಾಕಿ ಹುರಿಯಿರಿ. ಅದು ಹುರಿದಾಗ ಅದಕ್ಕೆ ಇಂಗು ಮತ್ತು ಹುಣಸೆ ಹಣ್ಣನ್ನು ಸೇರಿಸಿ. ತದನಂತರ ಇದಕ್ಕೆ ಮೊದಲೇ ಹುರಿದಿಟ್ಟ ಕೊಬ್ಬರಿ ತುರಿ, ಬೆಳ್ಳುಳ್ಳಿ, ಮತ್ತು ಕರಿಬೇವನ್ನು ಸೇರಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಹುರಿದ ಪದಾರ್ಥಗಳು ತಣ್ಣಗಾದ ನಂತರ ಅದನ್ನೆಲ್ಲವನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ ರುಚಿಯಾದ ಬೆಳ್ಳುಳ್ಳಿ ಚಟ್ನಿ ಪುಡಿ ರೆಡಿ.
 
ಚಟ್ನಿ ಪುಡಿ ಚಪಾತಿ, ದೋಸೆ, ರೊಟ್ಟಿಯ ಜೊತೆ ರುಚಿಯಾಗಿರುತ್ತದೆ. ಚಟ್ನಿ ಪುಡಿಯನ್ನು ಒಣಗಿರುವ ಡಬ್ಬಗಳಲ್ಲಿ ಶೇಖರಿಸಿಟ್ಟರೆ ಸುಮಾರು 1 ತಿಂಗಳವರೆಗೆ ಕೆಡದಂತೆ ಉಳಿಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ