ದಿನಾ ಒಂದೇ ತರಹದ ಚಟ್ನಿಯನ್ನು ತಿಂದು ನೀವು ಬೇಸರಗೊಂಡಿದ್ದರೆ ನಿಮಗಾಗಿ ರುಚಿಕರವಾದ ಚಟ್ನಿಗಳನ್ನು ತಯಾರಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ
1. ಪುದೀನ ಚಟ್ನಿ / ಮಿಂಟ್ ಚಟ್ನಿ
ಬೇಕಾಗುವ ಸಾಮಗ್ರಿ
ಪುದೀನ ಎಲೆಗಳು - 3/4 ಕಪ್
ತೆಂಗಿನಕಾಯಿ ತುರಿ - 1/2 ಕಪ್ - 3/4 ಕಪ್
ಹಸಿಮೆಣಸು - 6
ಕಡಲೆ ಬೆಳೆ- 1 ಚಮಚ
ಹುಣಿಸೆಹಣ್ಣು - ಚಿಕ್ಕ ತುಂಡು
ಬೆಳ್ಳುಳ್ಳಿ - 2 ರಿಂದ 3 ಎಸಳು
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಬೆಳೆಯನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಿ, ಅದೇ ಪ್ಯಾನ್‌ನಲ್ಲಿ ಪುದೀನ ಎಲೆಗಳು, ಹಸಿಮೆಣಸು, ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. ಹುರಿದ ಪದಾರ್ಥವನ್ನು ಮಿಕ್ಸಿಯ ಜಾರಿನಲ್ಲಿ ಹಾಕಿ ಅದಕ್ಕೆ ತೆಂಗಿನಕಾಯಿ ತುರಿ, ನೆನಸಿದ ಹುಣಸೆ ಹಣ್ಣಿನ ಚೂರು ಬೇಕಾದಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ತದನಂತರ ಅದೇ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಸೊಪ್ಪು, ಸಾಸಿವೆ, ಮತ್ತು ಉದ್ದಿನ ಬೇಳೆ ಹಾಕಿ, ಒಗ್ಗರಣೆ ಹಾಕಿ ರುಬ್ಬಿರುವ ಮಿಶ್ರಣಕ್ಕೆ ಒಗ್ಗರಣೆಯನ್ನು ಕೊಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಸಿ ಚೆನ್ನಾಗಿ ತಿರುವಿದರೆ ರುಚಿಕರವಾದ ಪುದಿನ ಚಟ್ನಿ ಸವಿಯಲು ಸಿದ್ಧ. ಇದು ದೋಸೆ ಅಥವಾ ಇಡ್ಲಿಯೊಂದಿಗೆ ಚೆನ್ನಾಗಿರುತ್ತದೆ.
2. ಟೊಮೇಟೊ ಚಟ್ನಿ
ಬೇಕಾಗುವ ಸಾಮಗ್ರಿ
4 - ಟೊಮೆಟೊ (ಚಿಕ್ಕದಾಗಿ ಹೆಚ್ಚಿದ್ದು)
1 - ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು)
ಕರಿಬೇವು
ಬೆಳ್ಳುಳ್ಳಿ - 1-2 ಎಸಳು
1/2 ಚಮಚ ಸಕ್ಕರೆ
1/2 ಚಮಚ ಜೀರಿಗೆ
1 - 1 1/2 ಚಮಚ ಖಾರ ಪುಡಿ
ಉಪ್ಪು
ಎಣ್ಣೆ
ಅರಿಶಿಣ ಪುಡಿ
1/2 ಚಮಚ ಸಾಸಿವೆ
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಜಜ್ಜಿ ಸೇರಿಸಿ ಒಗ್ಗರಣೆ ಹಾಕಿ. ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಹುರಿದುಕೊಳ್ಳಿ, ನಂತರ ಅದಕ್ಕೆ ಟೊಮಟೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಖಾರ ಪುಡಿ, ಸಕ್ಕರೆ, ಉಪ್ಪು, ಅರಿಶಿಣ ಪುಡಿ ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಟೊಮಟೊ ಚೆನ್ನಾಗಿ ಬೆಂದ ನಂತರ ಮಿಶ್ರಣವನ್ನು ಸ್ವಲ್ಪ ಮ್ಯಾಶ್ ಮಾಡಿದರೆ, ರುಚಿಕರ ಟೊಮೆಟೊ ಚಟ್ನಿ ಸವಿಸಲು ಸಿದ್ಧ
3. ಶೇಂಗಾ ತೆಂಗಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ
1/2 ಕಪ್ ಕಡಲೆಕಾಯಿ ಅಥವಾ ಶೇಂಗಾ
2 - 4 ಹಸಿಮೆಣಸಿನಕಾಯಿ
3 - 4 ಎಸಳು ಬೆಳ್ಳುಳ್ಳಿ
ಕರಿಬೇವು
ಸಾಸಿವೆ
1 ಕೆಂಪು ಮೆಣಸಿನಕಾಯಿ
ಎಣ್ಣೆ
1/4 ಕಪ್ ತುರಿದ ತೆಂಗಿನಕಾಯಿ
ಚಿಕ್ಕ ತುಂಡು ಹುಣಸೆಹಣ್ಣು
ರುಚಿಗೆ ತಕ್ಕಂತೆ ಉಪ್ಪು
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಮತ್ತು 1/2 ಕಪ್ ಶೇಂಗಾ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿರಿಸಿಕೊಳ್ಳಿ. ಅದೇ ಬಾಣಲೆಯಲ್ಲಿ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹುರಿದು ಪಕ್ಕಕ್ಕಿರಿಸಿ ತದನಂತರ ಮಿಕ್ಸಿ ಜಾರಿನಲ್ಲಿ ತೆಂಗಿನಕಾಯಿ ತುರಿ, ಹುಣಸೆಹಣ್ಣು, ಹುರಿದ ಶೇಂಗಾ, ಹುರಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಒಂದು ಬಟ್ಚಲಿನಲ್ಲಿ ತೆಗೆದಿಟ್ಟುಕೊಳ್ಳಿ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಸೊಪ್ಪು, ಸಾಸಿವೆ, ಮತ್ತು 1 ತುಂಡು ಮಾಡಿದ ಕೆಂಪು ಮೆಣಸಿನಕಾಯಿಯ ಜೊತೆಗೆ ಒಗ್ಗರಣೆ ಹಾಕಿ. ಈಗ ಒಗ್ಗರಣೆಯನ್ನು ಚಟ್ನಿಯ ಜೊತೆ ಮಿಶ್ರಣ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿದರೆ ಶೇಂಗಾ ಚಟ್ನಿ ಸಿದ್ಧ. ಇದು ದೋಸೆ, ಇಡ್ಲಿ ಅಥವಾ ಚಪಾತಿ ತಿನ್ನಲು ರುಚಿಕರವಾಗಿರುತ್ತದೆ
4. ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿ
ಗೋಡಂಬಿ ಬೀಜ - 50 ಗ್ರಾಂ.
ಉಪ್ಪು
ಟೊಮಟೊ - 2 (ಚಿಕ್ಕದಾಗಿ ಹೆಚ್ಚಿದ್ದು)
ಇಂಗು - 1 ಚಿಟಿಕೆ
ಹುಣಿಸೇಹಣ್ಣು - ಚಿಕ್ಕ ತುಂಡು
ಕೆಂಪು ಮೆಣಸಿನಕಾಯಿ - 4
ಈರುಳ್ಳಿ - 3 (ಚಿಕ್ಕದಾಗಿ ಹೆಚ್ಚಿದ್ದು)
ಬೆಲ್ಲ - 1 ಚಮಚ
ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಎಣ್ಣೆ ಬಿಸಿ ಮಾಡಿ ಅದಕ್ಕೆ ಕೆಂಪು ಮೆಣಸಿನಕಾಯಿ, ಹುಣಸೆಹಣ್ಣು, ಈರುಳ್ಳಿ, ಇಂಗು ಸೇರಿಸಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ಅದಕ್ಕೆ ಉಪ್ಪು, ಟೊಮೆಟೊ, ಗೋಡಂಬಿ ಬೀಜಗಳನ್ನು ಹಾಕಿ ಸ್ವಲ್ಪ ಸಮಯ ಬೇಯಿಸಿ ನಂತರ ಬೆಲ್ಲವನ್ನು ಸೇರಿಸಿ. ಅದು ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ ಈರುಳ್ಳಿ ಚಟ್ನಿ ಸವಿಯಲು ಸಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.