ಕಾರ್ಪೋರೇಟ್ ಕಂಪೆನಿಗಳ ಫಲಿತಾಂಶದಿಂದ ಶೇರುಪೇಟೆ ಚೇತರಿಕೆ

ಶುಕ್ರವಾರ, 22 ಜುಲೈ 2016 (11:13 IST)
ಐಟಿಸಿ ಕಂಪೆನಿ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 54 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಎಫ್‌ಎಂಸಿಜಿ, ವಿದ್ಯುತ್, ಬಂಡವಾಳ ವಸ್ತುಗಳು, ವಾಹನೋದ್ಯಮ, ಗೃಹೋಪಕರಣ ವಸ್ತುಗಳು ಮತ್ತು ಹೆಲ್ತ್‌ಕೇರ್ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಶೇ.0.75 ರಷ್ಟು ಚೇತರಿಕೆ ಕಂಡಿದೆ. 
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 205.37 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 53.67 ಪಾಯಿಂಟ್‌ಗಳ ಏರಿಕೆ ಕಂಡು 27,764.19 ಅಂಕಗಳಿಗೆ ತಲುಪಿದೆ. 
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 15.30 ಪಾಯಿಂಟ್‌ಗಳ ಏರಿಕೆ ಕಂಡು 8,525.40 ಅಂಕಗಳಿಗೆ ತಲುಪಿದೆ.
 
ಗೇಲ್, ವಿದ್ಯುತ್, ಏಷ್ಯನ್ ಪೇಂಟ್ಸ್, ಟಾಟಾ ಮೋಟಾರ್ಸ್, ಮಹೀಂದ್ರಾ ಆಂಡ್ ಮಹೀಂದ್ರಾ, ಎನ್‌ಟಿಪಿಸಿ, ಎಲ್‌ಆಂಡ್‌ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇರುಗಳು ವಹಿವಾಟಿನಲ್ಲಿ ಲಾಭದತ್ತ ಸಾಗಿವೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.89 ರಷ್ಟು ಕುಸಿತ ಕಂಡಿದ್ದರೆ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.40 ರಷ್ಟು ಇಳಿಕೆ ಕಂಡಿದೆ. ಶಾಂಘೈ ಶೇರುಪೇಟೆ ಕೂಡಾ ಶೇ.0.31 ರಷ್ಟು ಕುಸಿತ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಕೂಡಾ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.42 ರಷ್ಟು ಇಳಿಕೆ ಕಂಡಿದೆ.  

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ