ಅಪಘಾತಕ್ಕೆ ನಾನೇ ಕಾರಣ, ಅಕ್ರಮ ಸಂಬಂಧ ಸುಳ್ಳು: ವುಡ್ಸ್

ಸೋಮವಾರ, 30 ನವೆಂಬರ್ 2009 (12:22 IST)
ಅಪಘಾತ ನಡೆದ ಎರಡು ದಿನಗಳ ನಂತರ ಮೌನ ಮುರಿದಿರುವ ಗಾಲ್ಫ್ ಸೂಪರ್ ಸ್ಟಾರ್ ಟೈಗರ್ ವುಡ್ಸ್, ಕಾರು ಅಪಘಾತಕ್ಕೆ ಸಂಪೂರ್ಣ ತಾನೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಜತೆಗೆ ತನ್ನ ಖಾಸಗಿ ಜೀವನದ ಬಗ್ಗೆ ಕೇಳಿ ಬಂದಿದ್ದ ಗಾಳಿ ಸುದ್ದಿಗಳನ್ನು ಅವರು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ.

ತನ್ನ ವೆಬ್‌ಸೈಟ್‌ನಲ್ಲಿ ಭಾನುವಾರ ಪ್ರಕಟಿಸಿರುವ ಹೇಳಿಕೆಯಲ್ಲಿ ವುಡ್ಸ್, ಅಪಘಾತಕ್ಕೆ ಸಂಪೂರ್ಣ ತಾನೇ ಜವಾಬ್ದಾರ ಎಂದು ಹೇಳಿದ್ದಾರೆ. ಅಪಘಾತಕ್ಕೆ ಅವರ ಪತ್ನಿ ಕಾರಣ ಎಂದು ಟಿಎಂಜೆಡ್ ವೆಬ್‌ಸೈಟ್ ವರದಿ ಮಾಡಿತ್ತು.

ಈ ಪರಿಸ್ಥಿತಿಗೆ ನಾನೇ ಕಾರಣ. ಇದರಿಂದಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ನಿಜಕ್ಕೂ ಮುಜುಗರವುಂಟಾಗಿದೆ. ನಾನೂ ಒಬ್ಬ ಮನುಷ್ಯ, ಹಾಗಾಗಿ ಪರಿಪೂರ್ಣನಲ್ಲ. ಮುಂದೆ ಹೀಗಾಗದಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಅದೇ ಹೊತ್ತಿಗೆ ಈ ಘಟನೆಯ ಬಗ್ಗೆ ಹುಟ್ಟಿಕೊಂಡಿರುವ ಕುತೂಹಲವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನನ್ನ ಕುಟುಂಬ ಮತ್ತು ನನ್ನ ಬಗ್ಗೆ ಅಗೌರವಯುತವಾಗಿ ಹಬ್ಬುತ್ತಿರುವ ಮಾನಹಾನಿಕರ ಮತ್ತು ಅಸ್ತಿತ್ವದಲ್ಲೇ ಇಲ್ಲದ ವಿಚಾರಗಳ ಕುರಿತ ಗಾಳಿ ಸುದ್ದಿಗಳು ಸುಳ್ಳು ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ವುಡ್ಸ್ ಹೇಳಿಕೆ ನೀಡಿದ್ದಾರೆ.

ನ್ಯೂಯಾರ್ಕ್ ಕ್ಲಬ್ ನಿರೂಪಕಿ ರಚೆಲ್ ಯುಚಿಟೆಲ್ ಜತೆ ವುಡ್ಸ್ ಅಕ್ರಮ ಸಂಬಂಧ ಹೊಂದಿದ್ದು, ಈ ಸಂಬಂಧ ಪತ್ನಿ ಜತೆ ನಡೆದ ಜಗಳದ ಪರಿಣಾಮ ಗಾಯ ಮಾಡಿಕೊಂಡಿದ್ದ ವುಡ್ಸ್ ಕೋಪದಿಂದ ತನ್ನ ಕಾರಿನ ಗಾಜನ್ನು ಗಾಲ್ಫ್ ಬ್ಯಾಟಿನಿಂದ ಒಡೆದು ಹಾಕಿದ್ದರು. ಬಳಿಕ ಅವರು ಕಾರನ್ನು ಚಲಾಯಿಸಿಕೊಂಡು ಹೋದಾಗ ಅಪಘಾತ ನಡೆದಿತ್ತು ಎಂದು ಕೆಲವು ಪತ್ರಿಕಾ ವರದಿಗಳು ಈ ಹಿಂದೆ ಹೇಳಿದ್ದವು.

ಈ ಸಂಬಂಧ ಪೊಲೀಸ್ ವಿಚಾರಣೆಗೆ ವುಡ್ಸ್ ನಿರಾಕರಿಸಿದ್ದಾರೆ. ಕಳೆದೆರಡು ದಿನಗಳಿಂದ ಫ್ಲೋರಿಡಾ ಹೆದ್ದಾರಿ ಪಾಲಕರು ವುಡ್ಸ್ ಜತೆಗೆ ಮಾತನಾಡಲು ಕಾಯುತ್ತಿದ್ದು, ಅಪಘಾತದ ವಿಚಾರಣೆ ನಡೆಸಲು ಬಯಸುತ್ತಿದ್ದಾರೆ. ಆದರೆ ವುಡ್ಸ್ ಇದುವರೆಗೂ ಪೊಲೀಸರನ್ನು ಮನೆಯ ಒಳಗೆ ಬಿಟ್ಟುಕೊಂಡಿಲ್ಲ.

ಫ್ಲೋರಿಡಾದ ಒರ್ಲಾಂಡೋದಲ್ಲಿನ ವುಡ್ಸ್ ಎರಡು ಮಿಲಿಯನ್ ಡಾಲರ್ ಮೌಲ್ಯದ ಮನೆಯ ಹತ್ತಿರ ಕಾರು ಬೆಂಕಿ ನಂದಿಸುವ ಕೊಳಾಯಿ ಮತ್ತು ಮರಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಗೆ ಕಾರಣವೇನು ಎಂದು ವುಡ್ಸ್‌ರನ್ನು ವಿಚಾರಿಸಲು ಶುಕ್ರವಾರ ಮತ್ತು ಶನಿವಾರ ಪೊಲೀಸರು ನಡೆಸಿದ ಯತ್ನಗಳು ವಿಫಲವಾಗಿದ್ದವು. ಭಾನುವಾರವೂ ಇದು ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.

ಮನೆಯ ಪಕ್ಕದಲ್ಲೇ ಅಪಘಾತ ನಡೆದ ಸದ್ದು ಕೇಳಿದ ವುಡ್ಸ್ ಪತ್ನಿ ಇರಿನ್ ನಾರ್ಡೆಗ್ರೆನ್ ಓಡಿ ಬಂದು ಗಾಲ್ಫ್ ಬ್ಯಾಟಿನಿಂದ ಕಾರಿನ ಗಾಜನ್ನು ಒಡೆದು ಗಂಡನನ್ನು ರಕ್ಷಿಸಿದ್ದರು ಎಂದು ಒರ್ಲಾಂಡೋ ಪೊಲೀಸ್ ಮುಖ್ಯಸ್ಥರು ಹೇಳಿಕೆ ನೀಡಿದ್ದರು.

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುವುದು ಏನೂ ಇಲ್ಲವೆಂಬಂತೆ ಮಾತನಾಡಿರುವ ವುಡ್ಸ್, ಘಟನೆ ವೈಯಕ್ತಿಕ ವಿಚಾರ ಎಂದಿದ್ದಾರೆ.

ಅಲ್ಲದೆ ಅವರ ವಕೀಲರು ಈ ಸಂಬಂಧ ಬಹಿರಂಗ ಹೇಳಿಕೆ ನೀಡಿದ್ದಾರೆ. ವುಡ್ಸ್ ಅಪಘಾತದ ಸಂದರ್ಭದಲ್ಲಿ ಮದ್ಯಪಾನ ಮಾಡಿರಲಿಲ್ಲ. ಟ್ರಾಫಿಕ್ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ನಾವು ಕಾನೂನು ಪ್ರಕಾರ ಮುಂದುವರಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ