ಏಷಿಯನ್ ಯೂತ್ ಗೇಮ್ಸ್: ಭಾರತಕ್ಕೆರಡು ಪದಕ

ಮಂಗಳವಾರ, 30 ಜೂನ್ 2009 (20:19 IST)
ಏಷಿಯನ್ ಯೂತ್ ಗೇಮ್ಸ್ ಉದ್ಘಾಟನ ಆವೃತ್ತಿಯ ಆರಂಭಿಕ ದಿನದಂದೇ ಅದ್ಭುತ ಸಾಧನೆ ಮಾಡಿರುವ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಸಿಂಗಾಪುರದಲ್ಲಿ ಇಂದು ಆರಂಭವಾಗಿರುವ ಟೂರ್ನಮೆಂಟ್‌ನ ಡಿಸ್ಕಸ್ ಎಸೆತದಲ್ಲಿ ಅರ್ಜುನ್ ಚಿನ್ನದ ಪದಕ ಹಾಗೂ ಹುಡುಗರ 1500 ಮೀಟರ್ ಓಟದಲ್ಲಿ ರಾಹುಲ್ ಕುಮಾರ್ ಬೆಳ್ಳಿ ಪದಕ ಪಡೆದರು.

18ರ ಹರೆಯದ ಅರ್ಜುನ್ ಐದನೇ ಮತ್ತು ಅಂತಿಮ ಪ್ರಯತ್ನದಲ್ಲಿ 58.72 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಜಪಾನ್‌ನ ಆಕಿಬಾ ಕೇಂತಾ 51.84 ಮೀಟರ್‌ನೊಂದಿಗೆ ದ್ವಿತೀಯ ಹಾಗೂ ಕಜಕೀಸ್ತಾನದ ಮಿಲೋವಾತ್‌ಸ್ಕೈ ಯೆವ್ಜೆನೀವ್ 51.73 ಮೀಟರ್‌ನೊಂದಿಗೆ ಮೂರನೇ ಸ್ಥಾನ ಪಡೆದರು.

ರಾಹುಲ್ 4.05.01 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಿಟ್ಟಿಸಿದರು. ಅವರಿಗೂ ಮುಂಚೆ ಅಂದರೆ 4.00.91 ನಿಮಿಷದಲ್ಲಿ ಗುರಿ ಮುಟ್ಟಿದ ಯೆಮನ್‌ನ ಲಾಯಹ್ ವಲೀದ್ ಸಲೇಹ್ ಆಲಿಯವರು ಚಿನ್ನ ಹಾಗೂ 4.05.32 ನಿಮಿಷಗಳನ್ನು ತೆಗೆದುಕೊಂಡ ಇರಾನ್‌ನ ಬೆಯ್ರಾನ್ವಾಂದ್ ಅಮೀರ್ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

ಭಾರತದಿಂದ ಅಥ್ಲೆಟಿಕ್ಸ್, ಈಜು, ಡೈವಿಂಗ್, ಶೂಟಿಂಗ್, ಟೇಬಲ್ ಟೆನಿಸ್, ಬೀಚ್ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಸೇರಿದಂತೆ ಒಟ್ಟು ಏಳು ವಿಭಾಗಗಳಿಂದ 48 ಕ್ರೀಡಾಪಟುಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ