ಕಾನ್ಫೆಡರೇಷನ್ಸ್ ಕಪ್: ಬಲಿಷ್ಠ ಬ್ರೆಜಿಲ್-ಸ್ಪೇನ್ ಹಣಾಹಣಿ

ಭಾನುವಾರ, 30 ಜೂನ್ 2013 (12:16 IST)
PTI
ಹ್ಯಾಟ್ರಿಕ್ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಆತಿಥೇಯ ಬ್ರೆಜಿಲ್ ಒಂದೆಡೆಯಾದರೆ, ವಿಶ್ವ ಹಾಗೂ ಯೂರೋಪಿಯನ್ ಚಾಂಪಿಯನ್ ಎನಿಸಿರುವ ಸ್ಪೇನ್ ಮತ್ತೊಂದೆಡೆ. ಕಾನ್ಫೆಡರೇಷನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಇವೆರಡು ತಂಡಗಳು ಎದುರಾಗಲಿದ್ದು, ಫುಟ್‌ಬಾಲ್ ಪ್ರಿಯರ ಚಿತ್ತ ಬ್ರೆಜಿಲ್‌ನ ಐತಿಹಾಸಿಕ ಮರಕಾನಾ ಕ್ರೀಡಾಂಗಣದತ್ತ ನೆಟ್ಟಿದೆ.

2005 ಮತ್ತು 2009 ರಲ್ಲಿ ಚಾಂಪಿಯನ್ ಆಗಿದ್ದ ಬ್ರೆಜಿಲ್ ತವರು ನೆಲದ ಪ್ರೇಕ್ಷಕರ ಎದುರು ಹ್ಯಾಟ್ರಿಕ್ ಪ್ರಶಸ್ತಿಯನ್ನು ಎತ್ತಿಹಿಡಿಯುವ ಕನಸು ಕಾಣುತ್ತಿದೆ. ಆದರೆ ಪ್ರಬಲ ಸ್ಪೇನ್ ಆ ಕನಸಿಗೆ ಅಡ್ಡಿಯಾಗಲು ಸಜ್ಜಾಗಿ ನಿಂತಿದೆ.

ಭಾನುವಾರ ಸ್ಪೇನ್ ಗೆದ್ದರೆ ಸತತವಾಗಿ ನಾಲ್ಕನೇ ಅಂತರರಾಷ್ಟ್ರೀಯ ಕಿರೀಟ ಮುಡಿಗೇರಿಸಿಕೊಂಡ ಹಿರಿಮೆ ತನ್ನದಾಗಿಸಿಕೊಳ್ಳಲಿದೆ. ಈ ತಂಡ 2008 ಹಾಗೂ 2012 ರಲ್ಲಿ ಯೂರೊ ಕಪ್ ಜಯಿಸಿತ್ತಲ್ಲದೆ, 2010ರ ವಿಶ್ವಕಪ್ ಟೂರ್ನಿಯಲ್ಲೂ ಚಾಂಪಿಯನ್ ಆಗಿತ್ತು.

ಆದರೆ ಸ್ಪೇನ್ ಒಮ್ಮೆಯೂ ಕಾನ್ಫೆಡರೇಷನ್ಸ್ ಕಪ್ ಗೆದ್ದುಕೊಂಡಿಲ್ಲ. 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದದ್ದು ಈ ತಂಡದ ಉತ್ತಮ ಸಾಧನೆ.

ಫೈನಲ್‌ನಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ ಐಕರ್ ಕ್ಯಾಸಿಲಾಸ್ ನೇತೃತ್ವದ ಸ್ಪೇನ್ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಆದರೆ ಕಾನ್ಫೆಡರೇಷನ್ಸ್ ಕಪ್ ಟೂರ್ನಿಯ ಇತಿಹಾಸವನ್ನು ನೋಡಿದರೆ ಬ್ರೆಜಿಲ್ ತಂಡದ ಪಾರಮ್ಯವನ್ನು ಕಾಣಬಹುದು.

ವೆಬ್ದುನಿಯಾವನ್ನು ಓದಿ