ಕಾಮನ್‌ವೆಲ್ತ್ ಹಗರಣ: ಜಯಚಂದ್ರನ್‌ ನ್ಯಾಯಾಂಗ ಬಂಧನಕ್ಕೆ

ಶನಿವಾರ, 27 ನವೆಂಬರ್ 2010 (18:03 IST)
ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಕ್ವೀನ್ಸ್ ಬ್ಯಾಟೋನ್ ರಿಲೇ ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ, ಕಾಮನ್‌ವೆಲ್ತ್ ಆಯೋಜಕ ಸಮಿತಿಯ ಅಧಿಕಾರಿ ಎಂ.ಜಯಚಂದ್ರನ್‌ಗೆ 11 ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದೆ.

ಸಿಬಿಐ ವಿಶೇಷ ನ್ಯಾಯಮೂರ್ತಿ ಎ.ಎಸ್.ಯಾದವ್, ಜಯಚಂದ್ರನ್‌ಗೆ ಡಿಸೆಂಬರ್‌ 8 ರವರೆಗೆ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದ್ದಾರೆ.

ಕಳೆದ ನವೆಂಬರ್ 23 ರಂದು ಬಂಧಿತರಾದ ಜಯಚಂದ್ರನ್, ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 8ಕ್ಕೆ ಮುಂದೂಡಿದೆ.

ಕಾಮನ್‌ವೆಲ್ತ್ ಆಯೋಜಕ ಸಮಿತಿಯ ಅಧಿಕಾರಿಗಳಾದ ಟಿ.ಎಸ್.ದರ್ಬಾರಿ ಮತ್ತು ಸಂಜಯ್ ಮಹೆಂದ್ರೂ ಅವರಿಗೆ ಡಿಸೆಂಬರ್ 8 ರವರೆಗೆ ನ್ಯಾಯಾಂಗ ಬಂಧನದ ಆದೇಶ ಈಗಾಗಲೇ ಹೊರಡಿಸಿದೆ.

ಆರೋಪಿಗಳ ವಿಚಾರಣೆ ಮುಕ್ತಾಯಗೊಂಡಿದ್ದು, ಅವರ ಹಾಜರಾತಿ ಅಗತ್ಯವಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

ಕಾಮನ್‌ವೆಲ್ತ್ ಆಯೋಜಕ ಸಮಿತಿಯ ಅಧಿಕಾರಿಗಳ ವಿರುದ್ಧ ಸಿಬಿಐ,ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ.

ವೆಬ್ದುನಿಯಾವನ್ನು ಓದಿ