ಕ್ರೀಡಾಹಬ್ಬ: ಕಾಮನ್‌ವೆಲ್ತ್‌ಗೆ ವರ್ಣರಂಜಿತ ಚಾಲನೆ

ಸೋಮವಾರ, 4 ಅಕ್ಟೋಬರ್ 2010 (09:41 IST)
PTI
ಎಲ್ಲ ಟೀಕೆ-ಟಿಪ್ಪಣಿಗಳ ನಡುವೆಯೂ ಭಾನುವಾರ ರಾತ್ರಿ ಅದ್ದೂರಿ ಹಾಗೂ ವರ್ಣರಂಜಿತ ಕಾರ್ಯಕ್ರಮಗಳ ಮಧ್ಯೆ 19ನೇ ಕಾಮನ್‌ವೆಲ್ತ್ ಕ್ರೀಡೆಗಳಿಗೆ ಬ್ರಿಟನ್ ಮಹಾರಾಣಿ ಅವರ ಪ್ರತಿನಿಧಿಯಾಗಿ ಆಗಮಿಸಿರುವ ವೇಲ್ಸ್ ರಾಜಕುಮಾರ ಚಾರ್ಲ್ಸ್ ಕಾಮನ್‌ವೆಲ್ತ್ ಕೂಟವನ್ನು ಉದ್ಘಾಟಿಸಿದರು. ಅವರ ಜೊತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೂ ಉದ್ಘಾಟನೆಗೆ ಸಾಕ್ಷಿಯಾದರು.

ಪ್ರಧಾನಿ ಮನಮೋಹನ್ ಸಿಂಗ್, ಕ್ರೀಡೆಗಳ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಮಾತನಾಡಿ ಶುಭ ಹಾರೈಸಿದರು. ನಂತರ ಭಾರತ ಕ್ರೀಡಾಪಟುಗಳಾದ ವಿಜೇಂದರ್ ಸಿಂಗ್, ಮೇರಿ ಕೋಮ್, ಸಮರೇಶ್ ಜಂಗ್ ಕ್ವೀನ್ಸ್ ಬೇಟನ್ ಅನ್ನು ಕ್ರೀಡಾಂಗಣದೊಳಕ್ಕೆ ತಂದು ವಿಶ್ವ ಕುಸ್ತಿ ಚಾಂಪಿಯನ್ ಸುಶೀಲ್ ಕುಮಾರ್ ಅವರಿಗೆ ನೀಡಿದರು. ಸುಶೀಲ್ ಜನರ ಹರ್ಷೋದ್ಘಾರದ ಮಧ್ಯೆ ರಾಜಕುಮಾರ ಚಾರ್ಲ್ಸ್ ಅವರಿಗೆ ಬೇಟನ್ ಹಸ್ತಾಂತರಿಸಿದರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅಭಿನವ್ ಬಿಂದ್ರಾ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಆಕರ್ಷಕ ಕುಣಿತ, ಚಂಡೆ ವಾದನ:ದೇಶದ ವಿವಿಧ ಭಾಗಗಳ ಕಲಾವಿದರು ಡೊಳ್ಳು ಬಾರಿಸುತ್ತ ಕುಣಿಯತೊಡಗಿದಾಗ, ಜರ್ಮನಿಯಿಂದ ತರಿಸಲಾಗಿರುವ ವಿಶೇಷ ಬಲೂನ್ ನಿಧಾನವಾಗಿ ಮೇಲೇರಿತು. ಅಲ್ಲಿಯವರೆಗೆ ನೆಲೆದ ಮೇಲೆ ಕುಳಿತಿದ್ದ ಗೊಂಬೆಗಳೂ ಮೇಲೆದ್ದವು. ಇದು ಮುಗಿಯುತ್ತಿದ್ದಂತೆಯೇ ಹರಿಹರನ್ ಅವರ ಜೊತೆ ಮಕ್ಕಳೆಲ್ಲ ಸ್ವಾಗತಂ ಹಾಡು ಹಾಡುವ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಕೈ ಜೋಡಿಸಿ ನಮಸ್ಕರಿಸುವ ಆಕಾರದಲ್ಲೇ ತಾಳ ಹಾಕಿದ ಮಕ್ಕಳು ಮತ್ತು ಯುವಕರು ಕ್ರೀಡಾಪಟುಗಳು ಮತ್ತು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಮಾರ್ಚ್‌ಫಾಸ್ಟ್‌ನಲ್ಲಿ ಮೊದಲಿಗೆ ಆಸ್ಟ್ರೇಲಿಯಾ ಆಗಮಿಸಿದ್ದರೆ, ಕೊನೆಯದಾಗಿ ಆತಿಥೇಯ ಭಾರತ ಬಂದಾಗ ಜನರು ತಪ್ಪಾಳೆ ತಟ್ಟಿ ಸ್ವಾಗತಿಸಿದರು.

ಅಂತಿಮವಾಗಿ ಎ.ಆರ್.ರೆಹಮಾನ್ ಅವರ ಜೀಯೋ, ಉಠೋ, ಬಡೋ, ಜೀತೋ ಹಾಡಿಗೆ ಸಾವಿರಾರು ಪ್ರೇಕ್ಷಕರು ದನಿಗೂಡಿಸಿದರು. ಕುಳಿತಲ್ಲೇ ಕುಣಿದು, ಹರ್ಷ ವ್ಯಕ್ತಪಡಿಸಿದರು. ಇದರೊಂದಿಗೆ ಉದ್ಘಾಟನಾ ಸಮಾರಂಭ ಸಮಾಪ್ತಿಯಾಗಿದ್ದರೂ, ಸೋಮವಾರ ಆರಂಭವಾಗುವ ಸ್ಪರ್ಧೆಗಳಿಗೆ ಚಾಲನೆ ನೀಡಿತು.

ಕಲ್ಮಾಡಿಗೆ ಗೇಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿರುವ ಆರೋಪಕ್ಕೆ ತುತ್ತಾಗಿದ್ದ ಸುರೇಶ್ ಕಲ್ಮಾಡಿ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರು ಕೂಗಿ ಗೇಲಿ ಮಾಡಿದ್ದು, ಕಲ್ಮಾಡಿಗೆ ಮುಜುಗರವನ್ನುಂಟು ಮಾಡಿತ್ತು.

ಬಿಗಿ ಭದ್ರತೆ-ಸರ್ಪಗಾವಲು:ಕಾಮಲ್‌ವೆಲ್ತ್ ಕ್ರೀಡಾಕೂಟದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವಿದೇಶಿ ಮತ್ತು ದೇಶಿ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮಾನವ ಸಹಿತ ಮತ್ತು ಮೂರು ಮಾನವ ರಹಿತ ಹೆಲಿಕಾಪ್ಟರ್ ಆಕಾಶದಲ್ಲಿ ಸುತ್ತು ಹೊಡೆಯುತ್ತ ಜನಸಾಮಾನ್ಯರ ಚಲನವಲನದ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. 175 ಕಂಪನಿ ಅರೆಸೇನಾ ಪಡೆ, ಐದು ಸಾವಿರ ಕಮಾಂಡರ್, ಒಂದು ನೂರು ಶೀಘ್ರ ಪ್ರಹಾರ ಪಡೆ, 15 ಬಾಂಬ್ ನಿಷ್ಕ್ರೀಯ ತಂಡ ಹಾಗೂ 200 ಬಾಂಬ್ ಪತ್ತೆ ನಾಯಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಿದ್ದು, ಎಲ್ಲೆಡೆ ಸರ್ಪಗಾವಲು ಹಾಕಲಾಗಿತ್ತು.

ಕ್ರೀಡಾಕೂಟ ಉದ್ಘಾಟನೆ ಮತ್ತು ಸಮಾರೋಪದ ದಿನದಂದು ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಎಚ್ಚರಿಕೆ ಮೀರಿಯೂ ಅಂಗಡಿ-ಮುಂಗಟ್ಟು ಬಾಗಿಲು ತೆರದರೆ 250 ರೂಪಾಯಿ ದಂಡ ಹೇರುವುದಾಗಿಯೂ ದೆಹಲಿ ಪೊಲೀಸ್ ಕಮೀಷನರ್ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಕೆಲವೆಡೆ ಮನೆಗಳಿಂದ ಹೊರ ಬಾರದಂತೆ ಜನರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.ನಗರದಲ್ಲಿ ಖಾಸಗಿ ಬಸ್ ಓಡಾಟ ನಿಷೇಧಿಸಾಲಿಗಿದ್ದು, ಆಟೋ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು.

ಹೆಜ್ಜೆ, ಹೆಜ್ಜೆಗೂ ಶಸ್ತ್ರಸಜ್ಜಿತ ಪೊಲೀಸರನ್ನು ನಿಲ್ಲಿಸಲಾಗಿದೆ. ಕ್ರೀಡಾಂಗಣಕ್ಕೆ ಬರುವ ಪ್ರತಿಯೊಬ್ಬರನ್ನು ಸಂಪೂರ್ಣ ಶೋಧಿಸಿ ಒಳಗಡೆ ಬಿಡಲಾಗುತ್ತಿದೆ. ಸಿಗರೇಟ್, ಬೆಂಕಿ ಪೊಟ್ಟಣ ಹಾಗೂ ಲೈಟರ್‌ಗಳು ನಿಷೇಧ ಎಂಬ ಬೋರ್ಡ್ ಎಲ್ಲೆಡೆ ರಾರಾಜಿಸುತ್ತಿದೆ. ಮಹಾನಗರದ ಮೂಲೆ, ಮೂಲೆಗೂ ಸಿಸಿ ಟಿವಿ ಅಳವಡಿಸಲಾಗಿದೆ. 1,600ಕ್ಕೂ ಅಧಿಕ ಸಿಸಿ ಟಿವಿಗಳು ಕ್ರೀಡಾಂಗಣ ಸುತ್ತುವರಿದಿದೆ. ಒಟ್ಟು ಐದು ಸಾವಿರಕ್ಕೂ ಅಧಿಕ ಸಿಸಿ ಟಿವಿ ಅಳವಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ