ಗಂಗೂಲಿ ಆರನೇ ಬಾರಿ ಚೆಸ್ ಚಾಂಪಿಯನ್

ಶನಿವಾರ, 3 ಜನವರಿ 2009 (19:54 IST)
ತಮಿಳುನಾಡಿನ ಎಂ. ಶ್ಯಾಮ್ ಸುಂದರ್ ವಿರುದ್ಧ ಫೈನಲ್‌ನಲ್ಲಿ ಡ್ರಾ ಸಾಧಿಸುವ ಮ‌ೂಲಕ 8 ಅಂಕ ಸಂಪಾದಿಸಿದ ಸೂರ್ಯ ಶೇಖರ್ ಗಂಗೂಲಿ 46ನೇ ರಾಷ್ಟ್ರೀಯ ಎ ಚೆಸ್ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿದ್ದಾರೆ. ಆ ಮ‌ೂಲಕ ಸತತ ಆರನೇ ಬಾರಿ ಈ ಸಾಧನೆಗೈದ ರಾಷ್ಟ್ರೀಯ ದಾಖಲೆಯನ್ನು ಗಂಗೂಲಿ ನಿರ್ಮಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿ ಸೂರ್ಯ ಶೇಖರ್ ಗಂಗೂಲಿ 8, ಅಕ್ಷಯ್ ರಾಜ್ ಕೋರೆ 7.5 ಹಾಗೂ ಪರಿಮಾರ್ಜುನ ನೇಗಿ 7.5 ಅಂಕಗಳನ್ನು ಪಡೆದಿದ್ದು ಮೊದಲ ಮ‌ೂರು ಸ್ಥಾನಗಳನ್ನು ಅಲಂಕರಿಸಿದರು.

ಬಿಳಿ ಕಾಯಿಗಳೊಂದಿಗೆ ಕಣಕ್ಕಿಳಿದಿದ್ದ ಗಂಗೂಲಿ ಬೇಗನೆ ಡ್ರಾದ ಪ್ರಸ್ತಾಪವಿಟ್ಟಿದ್ದರೂ ಶ್ಯಾಮ್ ಸುಂದರ್ ನಿರಾಕರಿಸಿದ್ದರು. ಕೊನೆಗೆ 30ನೇ ನಡೆಯಲ್ಲಿ ಸಮಾನ ಅಂಕ ಸಂಪಾದಿಸುವ ಮ‌ೂಲಕ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಪರಿಮಾರ್ಜುನ ನೇಗಿಯವರು ದೀಪನ್ ಚಕ್ರವರ್ತಿಯವರೆದುರು ಡ್ರಾ ಮಾಡಿಕೊಂಡರು. ಸೋಮವಾರ ಅಕ್ಷಯ್ ಕೋರೆಯವರೆದುರು ನೇಗಿಯವರು ಸೋಲುಂಡಿದ್ದರಿಂದ ಎರಡನೇ ಸ್ಥಾನ ಅಕ್ಷಯ್ ಕೋರೆಯವರದಾಯಿತು.

ಚಾಂಪಿಯನ್ ಗಂಗೂಲಿಯವರಿಗೆ 1 ಲಕ್ಷ ರೂಪಾಯಿ, ಎರಡನೇ ಮತ್ತು ಮ‌ೂರನೇ ಸ್ಥಾನ ಪಡೆದವರಿಗೆ ತಲಾ 70 ಸಾವಿರ ರೂಪಾಯಿ ಬಹುಮಾನ ನೀಡಲಾಯಿತು. ನಾಲ್ಕನೇ ಸ್ಥಾನ ಪಡೆದ ದೀಪನ್ ಚಕ್ರವರ್ತಿ 55 ಸಾವಿರ ರೂಪಾಯಿ ಹಾಗೂ ಪ್ರವೀಣ್ ತಿಪ್ಪೆ, ಶ್ರೀರಾಮ್ ಝಾ ಮತ್ತು ಪೊನ್ನುಸ್ವಾಮಿ 35 ಸಾವಿರ ರೂಪಾಯಿಗಳನ್ನು ಪಡೆದುಕೊಂಡರು.

ಆಟಗಾರರು ಗಳಿಸಿದ ಅಂಕಗಳು: ಸೂರ್ಯ ಶೇಖರ ಗಂಗೂಲಿ 8, ಅಕ್ಷಯ್ ರಾಜ್ ಕೋರೆ 7.5, ಪರಿಮಾರ್ಜುನ ನೇಗಿ 7.5, ದೀಪನ್ ಚಕ್ರವರ್ತಿ 7, ಕೆ. ರತ್ನಾಕರನ್ 6.5, ನೀಲೋತ್ಪಲ್ ದಾಸ್ 6.5, ಶ್ರೀರಾಮ್ ಝಾ 6.5, ಸತ್ಯಪ್ರಜ್ಞಾನ್ 6, ಪ್ರವೀಣ್ ತಿಪ್ಪೆ 5, ತೇಜಕುಮಾರ್ 4.5, ಶ್ಯಾಮ್ ಸುಂದರ್ 4.5, ಕೊಂಗುವೇಲ್ 4.5 ಹಾಗೂ ಆಧಿಬನ್ 4 ಅಂಕಗಳನ್ನು ಗಳಿಸಿದ್ದರು.

ವೆಬ್ದುನಿಯಾವನ್ನು ಓದಿ