ಗೇಮ್ಸ್‌ಗಾಗಿ ಕ್ರೀಡಾಪಟುಗಳ ತರಬೇತಿಗೆ 678 ಕೋಟಿ ರೂ.

ಶುಕ್ರವಾರ, 27 ನವೆಂಬರ್ 2009 (12:19 IST)
ಮುಂದಿನ ವರ್ಷದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಪೂರ್ವತಯಾರಿ ನಡೆಸುತ್ತಿರುವ ಭಾರತ, 485 ಮಹಿಳೆಯರೂ ಸೇರಿದಂತೆ ಒಟ್ಟು 1140 ಕ್ರೀಡಾಪಟುಗಳಿಗಾಗಿ 678 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ರಾಜ್ಯ ಸಚಿವ ಪ್ರತೀಕ್ ಪ್ರಕಾಶ್ ಬಾಪು ಪಾಟೀಲ್, 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆತಿಥೇಯರ ನಿರ್ವಹಣೆಯನ್ನು ವೃದ್ಧಿಸುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಅಕ್ಟೋಬರ್ 3ರಿಂದ 14ರವರೆಗೆ ನಡೆಯುವ ಗೇಮ್ಸ್‌ನ ಎಲ್ಲಾ ಸ್ಪರ್ಧೆಗಳನ್ನೂ ಇದು ಒಳಗೊಂಡಿದ್ದು, 655 ಪುರುಷರು ಹಾಗೂ 485 ಮಹಿಳಾ ಕ್ರೀಡಾಪಟುಗಳನ್ನು ತರಬೇತಿಗಾಗಿ ಆಯ್ಕೆ ನಡೆಸಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ಸಂಬಂಧಪಟ್ಟ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಜತೆ ಮಾತುಕತೆ ನಡೆಸಿದ ನಂತರ ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಎಂದರು.

ಬಿಲ್ಗಾರಿಕೆ, ಅಥ್ಲೆಟಿಕ್ಸ್, ಅಕ್ವಾಟಿಕ್ಸ್, ಬ್ಯಾಡ್ಮಿಂಟನ್, ಪುರುಷರ ಬಾಕ್ಸಿಂಗ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಹಾಕಿ, ಲಾನ್ ಬೌಲ್ಸ್, ಮಹಿಳೆಯರ ನೆಟ್‌ಬಾಲ್, ಪುರುಷರ ರಗ್ಬೀ ಸೆವೆನ್ಸ್, ಶೂಟಿಂಗ್, ಸ್ಕ್ವಾಷ್, ಟೇಬಲ್ ಟೆನಿಸ್, ಟೆನಿಸ್ ವೇಟ್‌ಲಿಫ್ಟಿಂಗ್, ರೆಸ್ಲಿಂಗ್ ಹಾಗೂ ಅಥ್ಲೆಟಿಕ್ಸ್, ಪವರ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಸ್ವಿಮ್ಮಿಂಗ್‌ಗಳೊಂದಿಗೆ ಎಲೈಟ್ ಅಥ್ಲೆಟಿಕ್ಸ್ ಮುಂತಾದ ವಿಭಾಗಗಳನ್ನು ಈ ತರಬೇತಿಗೆ ಆಯ್ಕೆಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ