ಜ್ವಾಲಾ ಗುಟ್ಟಾ-ಅಶ್ವಿ‌ನಿ ಪೊನ್ನಪ್ಪ ಜೋಡಿ ಗುಡ್‌ಬೈ

ಮಂಗಳವಾರ, 16 ಜುಲೈ 2013 (16:51 IST)
PTI
ಜ್ವಾಲಾ ಗುಟ್ಟಾ-ಅಶ್ವಿ‌ನಿ ಪೊನ್ನಪ್ಪ ಭಾರತೀಯ ವನಿತಾ ಬ್ಯಾಡ್ಮಿಂಟನ್‌ನ ಯಶಸ್ವೀ ಜೋಡಿ. ಆದರೆ ಸದ್ಯ ಈ ಜೋಡಿ ಬೇರ್ಪಡಲಿದೆ. ಕರ್ನಾಟಕದವರಾದ ಅಶ್ವಿ‌ನಿ ಪೊನ್ನಪ್ಪ ಅನನುಭವಿ ಪ್ರಜ್ಞಾ ಗದ್ರೆ ಜತೆಗೂಡಿ ಕಣಕ್ಕಿಳಿಯಲಿದ್ದಾರೆ. ಎಳೆಯ ಆಟಗಾರ್ತಿಯನ್ನು ಪಳಗಿಸಬೇಕಾದ ಜವಾಬ್ದಾರಿ ತನ್ನ ಮೇಲಿದೆ ಎನ್ನುತ್ತಾರೆ ಅಶ್ವಿ‌ನಿ.

'ಜ್ವಾಲಾ ಆತ್ಮವಿಶ್ವಾದ ಗಣಿ. ಜತೆಯಾಟದ ವೇಳೆಯೆಲ್ಲ ಸಹ ಆಟಗಾರ್ತಿಯನ್ನು ಹುರಿದುಂಬಿಸುತ್ತ ಸೂಕ್ತ ಮಾರ್ಗದರ್ಶನ ನೀಡುತ್ತಿರುತ್ತಾರೆ. ಪ್ರಜ್ಞಾ ಕೂಡ ಅತ್ಯುತ್ತಮ ಆಟಗಾರ್ತಿ. ಆದರೆ ಅನುಭವದ ಕೊರತೆ ಕಾಡುತ್ತಿದೆ. ಮೊದಲ ಹೆಜ್ಜೆ ಇಡುತ್ತಿರುವ ಆಕೆಗೆ ಸೂಕ್ತ ಮಾರ್ಗದರ್ಶನ ನೀಡಿ ಪಳಗಿಸುವುದು ನನ್ನ ಕರ್ತವ್ಯ' ಎಂದು 23ರ ಹರೆಯದ ಅಶ್ವಿ‌ನಿ ಹೇಳಿದ್ದಾರೆ. ಮುಂಬರುವ 'ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌'ಗೆ ಪೂರ್ವಭಾವಿಯಾಗಿ ಇಲ್ಲಿನ ವಿಲೇ ಪಾರ್ಲೆಯ ಜಮ್ನಾಬಾೖ ನರ್ಸಿ ಸ್ಕೂಲ್‌ನಲ್ಲಿ 'ಶಟ್ಲ ಎಕ್ಸ್‌ಪ್ರೆಸ್‌' ಕ್ಲಿನಿಕ್‌ ಒಂದನ್ನು ಸಂಘಟಿಸಲು ಅಶ್ವಿ‌ನಿ ಆಗಮಿಸಿದ್ದರು.

ಹೊಸದಿಲ್ಲಿಯಲ್ಲಿ ನಡೆದ 2010ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಜ್ವಾಲಾ-ಅಶ್ವಿ‌ನಿ ಜೋಡಿ ಭಾರತಕ್ಕೆ ಬಂಗಾರವನ್ನು ತಂದು ಕೊಡುವ ಮೂಲಕ ನೂತನ ಸಂಚಲನ ಮೂಡಿಸಿತ್ತು. ಅನಂತರದ ವರ್ಷವೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಪ್ರಥಮ ಬಾರಿಗೆ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.

ವನಿತಾ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ಗಳೆರಡರಲ್ಲೂ ತನ್ನ ರ್‍ಯಾಂಕಿಂಗ್‌ ಹೆಚ್ಚಿಸಿಕೊಳ್ಳುವುದು ತನ್ನ ಸದ್ಯದ ಗುರಿ ಎಂದು ಅಶ್ವಿ‌ನಿ ಪೊನ್ನಪ್ಪ ಇದೇ ಸಂದರ್ಭದಲ್ಲಿ ಹೇಳಿದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನಿಯ ಜತೆಗಾರ ತರುಣ್‌ ಕೋನ.

'ತರುಣ್‌ ಮತ್ತು ಪ್ರಜ್ಞಾ ಪ್ರತಿಯೊಂದು ಪಂದ್ಯಾವಳಿಯಲ್ಲೂ ಪ್ರಗತಿ ಕಾಣುತ್ತಲೇ ಇದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಆಗಮಿಸುತ್ತಿದೆ. ಈ ಸಂದರ್ಭದಲ್ಲಿ ರ್‍ಯಾಂಕಿಂಗ್‌ನಲ್ಲಿ ಮೇಲೇರುವುದು ನಮ್ಮ ಮುಖ್ಯ ಗುರಿ...' ಎಂದರು.

ಸದ್ಯ ಅಶ್ವಿ‌ನಿ-ಪ್ರಜ್ಞಾ 27ನೇ ರ್‍ಯಾಂಕಿಂಗ್‌ ಹೊಂದಿದ್ದರೆ ಅಶ್ವಿ‌ನಿ-ತರುಣ್‌ 29ನೇ ಸ್ಥಾನದಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಆ. 5ರಿಂದ 11ರ ತನಕ ಚೀನಾದ ಗ್ವಾಂಗ್‌ಝೂನಲ್ಲಿ ನಡೆಯಲಿದೆ.

ಸದ್ಯ ಅಶ್ವಿ‌ನಿ-ಜ್ವಾಲಾ ಜತೆಯಾಗಿ ಆಡುವ ಯಾವುದೇ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಮುಂದಿನ ವರ್ಷದ ಕೊರಿಯಾ ಏಶ್ಯನ್‌ ಗೇಮ್ಸ್‌ ಹಾಗೂ ಅನಂತರದ ಸ್ಕಾಟ್ಲಂಡ್‌ ಕಾಮನ್ವೆಲ್ತ್‌ ಗೇಮ್ಸ್‌ ಎದುರಿರುವುದರಿಂದ ನೂತನ ಜತೆಗಾತಿ ಪ್ರಜ್ಞಾ ಗದ್ರೆಯೊಂದಿಗೆ ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಅಶ್ವಿ‌ನಿ ಮುಂದಿದೆ.

ಆ. 14ರಿಂದ ಆರಂಭವಾಗಲಿರುವ ಚೊಚ್ಚಲ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಪಂದ್ಯಾವಳಿಯನ್ನು ತಾನು ಕಾತರದಿಂದ ಎದುರು ನೋಡುತ್ತಿರುವುದಾಗಿ ಹೇಳಿದ ಅಶ್ವಿ‌ನಿ, ಇದರಲ್ಲಿ ಚೀನೀ ಆಟಗಾರರು ಪಾಲ್ಗೊಳ್ಳದಿರುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ