ನಾಲ್ಕು ಪದಕ ಖಾತ್ರಿಗೊಳಿಸಿದ ಬಾಕ್ಸರುಗಳು

ಗುರುವಾರ, 27 ನವೆಂಬರ್ 2008 (13:12 IST)
ಚೀನಾದಲ್ಲಿ ನಡೆಯುತ್ತಿರುವ ಐದನೇ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಪಟುಗಳು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ದೇಶಕ್ಕೆ ನಾಲ್ಕು ಪದಕ ತಂದುಕೊಡುವ ನಂಬಿಕೆ ಹುಟ್ಟಿಸಿದ್ದಾರೆ.

ಮೇರಿ ಕಾಮ್ 46 ಕೆ.ಜಿ., ಚೋಟು ಲಾರಾ 50 ಕೆ.ಜಿ, ಎಲ್. ಸರಿತಾ 52 ಕೆ.ಜಿ., ಯು. ಉಷಾ 57 ಕೆ.ಜಿ. ವಿಭಾಗದಲ್ಲಿ ಎದುರಾಳಿಗಳನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆದ್ದುಕೊಂಡಿದ್ದಾರೆ. ಆದರೆ 54 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಷ್ಮಾ ಕುಮಾರಿ ಮಾತ್ರ ಸೋಲೊಪ್ಪಿಕೊಂಡರು. ಇದೊಂದು ಕಹಿ ಅನುಭವ ಹೊರತುಪಡಿಸಿದರೆ ಭಾರತಕ್ಕೆ ಬುಧವಾರ ಶುಭದಿನವೆನಿಸಿತು. ಆ ಮ‌ೂಲಕ ನಾಲ್ವರು ಭಾರತೀಯ ಬಾಕ್ಸಿಂಗ್ ಪಟುಗಳು ಸೆಮಿಫೈನಲ್ ಪ್ರವೇಶ ಪಡೆದಿದ್ದು, ಓರ್ವ ಬಾಕ್ಸರ್ ಮಾತ್ರ ಹೊರ ದಬ್ಬಲ್ಪಟ್ಟಿದ್ದಾರೆ.

ಭಾರತದ ಮೇರಿ ಕಾಮ್‌ರವರು ಚೀನಾದ ಕ್ಸೀಯಾ-ಗಾನ್‌ರವರನ್ನು 4-0ಯ ಅಂತರದಿಂದ ಬಗ್ಗುಬಡಿದಿದ್ದಾರೆ. ಚೋಟು ಲಾರಾರವರು ಫ್ರಾನ್ಸಿನ ನಾವ್ ವರ್ಜಿನಿಯವರನ್ನು 4-1 ಅಂತರದಿಂದ ಸೋಲಿಸಿದ್ದಾರೆ. ಉಷಾ ಆಸ್ಟ್ರಿಯಾದ ಸಬ್ರಿನಾ ಒಸ್ಟಾವರಿಯವರನ್ನು 10-1ರಿಂದ ಭರ್ಜರಿಯಾಗಿ ಪರಾಜಯಗೊಳಿಸಿದರು. ಸರಿತಾರವರು ಮಂಗೋಲಿಯಾದ ಟ್ಸೆರೆಂಜಿಂಗ್‌ರವರನ್ನು 7-1ರ ಅಂತರಿಂದ ಮಣಿಸಿದ್ದಾರೆ.

ಸುಷ್ಮಾ ಯಾದವ್‌ರವರು ಅಮೆರಿಕಾದ ಸಿಂಥಿಯಾ ಮರೆಲ್ಲಾ ಮರೆನೊರವರೆದುರು 3-5ರ ಅಂತರದಿಂದ ಪರಾಭವಗೊಂಡು ನಿರಾಸೆ ಮ‌ೂಡಿಸಿದರು.

ಭಾರತದಿಂದ ಒಟ್ಟು ಏಳು ಮಂದಿ ಬಾಕ್ಸರುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, 48 ಕೆ.ಜಿ. ವಿಭಾಗದಲ್ಲಿ ಕಲ್ಪನಾ ಚೌಧುರಿ ಮತ್ತು ಪ್ರೀತಿ ಬೆನಿವಾರ್ 60 ಕೆ.ಜಿ. ವಿಭಾಗದಲ್ಲಿ ಈ ಹಿಂದೆ ಸೋಲೊಪ್ಪಿಕೊಂಡು ಹೊರಬಿದ್ದಿದ್ದರು. ಇದೀಗ ಸುಷ್ಮಾ ಕೂಡ ಅದೇ ಹಾದಿ ತುಳಿದ ಕಾರಣ ಭಾರತದಿಂದ ಇನ್ನು ನಾಲ್ಕು ಮಂದಿ ಮಾತ್ರ ಉಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ