ನಿಯಮ ಮರುಪರಿಶೀಲನೆಗೆ ಪೊಸೆರಿಯಾ ಒತ್ತಾಯ

ಶನಿವಾರ, 3 ಜನವರಿ 2009 (19:42 IST)
ಭಾರತ ಮ‌ೂಲದ ವಿದೇಶೀ ಕ್ರೀಡಾಳುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಧ್ವಜ ಹಿಡಿದು ಪ್ರತಿನಿಧಿಸುವಂತಿಲ್ಲ ಎಂದು ನಿಷೇಧ ವಿಧಿಸಿರುವ ಸರಕಾರದ ನಿಯಮವನ್ನು ಮರುಪರಿಶೀಲಿಸಬೇಕು ಎಂದು ಅಮೆರಿಕಾದ ಈಜುಪಟು ಅಂಕುರ್ ಪೊಸೆರಿಯಾ ಒತ್ತಾಯಿಸಿದ್ದಾರೆ.

ಅಂಕುರ್ ಪೊಸೆರಿಯಾ ಬೀಜಿಂಗ್ ಒಲಿಂಪಿಕ್ಸ್, ದೋಹಾ ಏಷಿಯಾಡ್ ಮತ್ತು ಎರಡು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಭಾರತ ಸರಕಾರದ ಈ ನಿಯಮದಿಂದಾಗಿ ಭಾರತೀಯ ಅಥ್ಲೀಟ್ ಆದ ನನ್ನ ಅಂತಾರಾಷ್ಟ್ರೀಯ ಕ್ರೀಡಾ ಜೀವನ ಅಂತ್ಯಗೊಳ್ಳಬಹುದು ಎಂದು ಭೀತಿ ವ್ಯಕ್ತಪಡಿಸಿದ ಅವರು ಮರುಪರಿಶೀಲನೆಗೆ ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ.

"ಭಾರತ ಮ‌ೂಲದ ವಿದೇಶೀ ಆಟಗಾರರನ್ನು ಪ್ರತಿಬಂಧಿಸಿರುವ ನಿಯಮಗಳನ್ನು ದಯವಿಟ್ಟು ಮರುಪರಿಶೀಲಿಸಬೇಕು ಎಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ. ಇದರಿಂದಾಗಿ ನಮ್ಮ ಕ್ರೀಡಾ ಸ್ಫೂರ್ತಿ, ಪ್ರಗತಿಗೆ ಧಕ್ಕೆಯಾಗಲಿದ್ದು ಭಾರತ ಮ‌ೂಲದವರಿಗೆ ತೀವ್ರ ನೋವುಂಟು ಮಾಡಲಿದೆ" ಎಂದು ಕ್ಯಾಲಿಫೋರ್ನಿಯಾದಲ್ಲಿ ಮಾತನಾಡುತ್ತಾ ಹೇಳಿದರು.

ಭಾರತಕ್ಕೆ ಮರಳುವಷ್ಟು ಆರ್ಥಿಕವಾಗಿ ಮುಂದುವರಿದವನು ತಾನಲ್ಲ. ಒಬ್ಬ ಒಲಿಂಪಿಕ್ ಈಜುಪಟುವಾಗಿ ನಾನು ಇತಿಹಾಸದಲ್ಲೇ ಭಾರತ ಮ‌ೂಲದ ವೇಗದ ಈಜುಪಟುವಾಗಿದ್ದೇನೆ. ವಿಶ್ವದಲ್ಲೇ ಭಾರತ ಮ‌ೂಲದ 100 ಮೀಟರ್ ಈಜು ಸ್ಪರ್ಧೆಯಲ್ಲಿ ಅಗ್ರ ಸ್ಥಾನದಲ್ಲಿರುವುದು ನನ್ನ ಹೆಸರು ಎಂದು ಪೊಸೆರಿಯಾ ತಿಳಿಸಿದ್ದಾರೆ.

"ನಾನು ಭಾರತವನ್ನು ಈಜು ಕ್ಷೇತ್ರವಾಗಿ ಬಳಸಿಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಪರಂಪರೆ, ಕುಟುಂಬ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಭಾರತೀಯ ಎನ್ನುವುದು ನನಗೆ ಹೆಮ್ಮೆ. ಒಬ್ಬ ಭಾರತೀಯನಾಗಿ ತಿರಂಗದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು ನನಗೆ ಹೆಮ್ಮೆಯೆನಿಸುತ್ತದೆ" ಎಂದು ಪೊಸೆರಿಯಾ ಅಭಿಮಾನದ ಮಾತುಗಳನ್ನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ