ಪುರುಷರ ಟೆನಿಸ್‌ ಪಂದ್ಯಾವಳಿ ಉದ್ಘಾಟನೆ

ಮಂಗಳವಾರ, 18 ಡಿಸೆಂಬರ್ 2012 (13:33 IST)
ಕ್ರೀಡಾ ಚಟುವಟಿಕೆ ಉತ್ತೇಜಿಸಲು ವಿಟಿಯು ಜ್ಞಾನಸಂಗಮ ಆವರಣದಲ್ಲಿ ಬಾಸ್ಕೆಟ್‌ ಬಾಲ್‌ ಮೈದಾನ, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಅಥ್ಲೆಟಿಕ್‌ ಟ್ರಾಫಿಕ್‌, ಒಳಾಂಗಣ ಕ್ರೀಡಾಂಗಣ ಸೌಲಭ್ಯ ಕಲ್ಪಿಸಿ ವಿವಿಯನ್ನು ಅಂತಾರಾಷ್ಟ್ರೀಯವಾಗಿ ಪರಿಚಯಿಸಲಾಗುವುದು ಎಂದು ವಿಟಿಯು ಕುಲಪತಿ ಡಾ| ಎಚ್‌. ಮಹೇಶಪ್ಪ ತಿಳಿಸಿದರು.

ವಿಟಿಯುದಲ್ಲಿ ಸೋಮವಾರ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಶನ್‌ ಹಾಗೂ ವಿಟಿಯು ವತಿಯಿಂದ ಆರಂಭವಾದ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌(ಐಟಿಎಫ್‌)ನ ವಲ್ಡ್‌ ರ್‍ಯಾಂಕಿಂಗ್‌ ಪುರುಷರ ಟೆನಿಸ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಅಂತಾರಾಷ್ಟಿಯ ಮಟ್ಟದ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲು ವಿಟಿಯು ಆವರಣದಲ್ಲಿ ಮೂಲ ಕ್ರೀಡಾ ಸೌಲಭ್ಯ ಒದಗಿಸಲಾಗಿದೆ. 2011-12ರಲ್ಲಿ ವಿವಿ ಆವರಣದಲ್ಲಿ ಹಲವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ನಡೆಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿಚ್ಛಿಸುವ ವೃತ್ತಿಪರ ಟೆನಿಸ್‌ ಆಟಗಾರರಿಗೆ ಐಟಿಎಫ್‌ ಚಾಂಪಿಯನ್‌ಶಿಪ್‌ ಪಂದ್ಯಗಳು ಮೆಟ್ಟಿಲುಗಳಾಗಿವೆ. ಈ ಪಂದ್ಯಗಳಲ್ಲಿ ಟೆನಿಸ್‌ ಕ್ರೀಡಾಪಟುಗಳು ಗಳಿಸುವ ಅಂಕಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆ ಮಾಡಲಾಗುವುದು. ಪಂದ್ಯಾವಳಿಗಳಲ್ಲಿ ಏಳು ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದರು.

ಸಮಗ್ರ ಚಾಂಪಿಯಶಿಪ್‌ಗೆ 10,000 ಡಾಲರ್‌, ಸಿಂಗಲ್ಸ್‌ನಲ್ಲಿ ಜಯಶಾಲಿಯಾದ ಕ್ರೀಡಾಪಟುವಿಗೆ 1,300 ಡಾಲರ್‌ ಹಾಗೂ ರನ್ನರ್‌-ಅಪ್‌ 900 ಡಾಲರ್‌ ಬಹುಮಾನ ಹಾಗೂ ಡಬಲ್ಸ್‌ ಭಾಗವಹಿಸಿದ ಜೋಡಿಗೆ 660 ಡಾಲರ್‌ ಹಾಗೂ ರನ್ನರ್‌-ಅಪ್‌ 330 ಡಾಲರ್‌ ಬಹುಮಾನ ನೀಡಲಾಗುತ್ತದೆ. ಸಿಂಗಲ್ಸ್‌ ಜಯಶಾಲಿಯಾದವರು 18ಅಂಕ, ಡಬಲ್ಸ್‌ನಲ್ಲಿ ಜಯಶಾಲಿಯಾದವರು 12 ಅಂಕ ಪಡೆದುಕೊಳ್ಳಲಿದ್ದಾರೆ ಎಂದರು.

ವಿದೇಶಿ ಅಗ್ರ ಶ್ರೇಯಾಂಕ ಟೆನ್ನಿಸ್‌ ಆಟಗಾರರಾದ ನೆದರ್‌ಲ್ಯಾಂಡ್‌ನ‌ ಕೊಯಿಲಿನ್‌ ವ್ಯಾನ್‌ ಬೀಮ್‌, ಜಿರೊಯಿನ್‌ ಬೆನಾರ್ಡ್‌, ಸ್ವಿಜರ್‌ಲ್ಯಾಂಡ್‌ನ‌ ಲುಕಾ ಮಾರ್ಗಾರೊಲಿ, ಅಮೇರಿಕಾದ ಮಿಕಾಯಿಲ್‌ ಶಾಬಾಜ್‌ ಹಾಗೂ ವಿಲಿಯಂ ಕೆಂಡಾಲ್ಲಾ, ರಶಿಯಾದ ಸೆರ್‌ಗೆç ಕ್ರೋಟಿಕ್‌ ಹಾಗೂ ಜರ್ಮನಿಯ ಟೊರ್‌ಸ್ಟೇನ್‌ ವೈಟೊಸ್ಕಾ ಸೇರಿದಂತೆ ಇನ್ನಿತರ ಆಟಗಾರರು ಭಾಗವಹಿಸಿದ್ದಾರೆ ಎಂದರು.

ಶಾಸಕ ಅಭಯ ಪಾಟೀಲ, ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೆಶನ್‌ ಜಂಟಿ ಕಾರ್ಯದರ್ಶಿ ಆರ್‌. ಆರ್‌. ರಾಮಸ್ವಾಮಿ, ವಿಟಿಯು ಕುಲಸಚಿವ ಡಾ| ಎಸ್‌.ಎ.ಕೋರಿ, ನೀರು ಸರಬರಾಜು ಮಂಡಳಿ ಅಭಿಯಂತರ ಬಸವರಾಜ್‌ ಅಲೆಗಾಂವ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ