'ಫಿಫಾ' ನಿಷೇಧಕ್ಕೊಳಗಾದ ಪೆರು

ಮಂಗಳವಾರ, 25 ನವೆಂಬರ್ 2008 (14:58 IST)
ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಅವರ ಎಚ್ಚರಿಕೆಯನ್ನು ಕಡೆಗಣಿಸಿದ ಕಾರಣಕ್ಕೆ ಪೆರುವನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾಟಗಳಿಂದ ಫಿಫಾ ನಿಷೇಧಿಸಿದೆ ಎಂದು ದಕ್ಷಿಣ ಅಮೆರಿಕಾ ಫುಟ್ಬಾಲ್ ಸಂಘಟನೆ ಸೋಮವಾರ ತಿಳಿಸಿದೆ.

ಪೆರು ಸರಕಾರ ಮತ್ತು ಅಲ್ಲಿನ ಫುಟ್ಬಾಲ್ ಫೆಡರೇಷನ್ ನಡುವಿನ ಹಗೆತನವನ್ನು ಸೋಮವಾರದೊಳಗೆ ಪರಿಹರಿಸಿಕೊಳ್ಳದಿದ್ದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿಷೇಧ ಹೇರಲಾಗುವುದು ಎಂದು ಬ್ಲಾಟರ್ ಕಳೆದ ವಾರ ಎಚ್ಚರಿಸಿದ್ದರು. ಆದರೆ ಯಾವುದೇ ಬದಲಾವಣೆ ಕಾಣದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರದೊಳಗೆ ಸರಕಾರ ಮತ್ತು ಫುಟ್ಬಾಲ್ ಫೆಡರೇಷನ್‌ನಿಂದ ಅಧಿಕೃತ ಪತ್ರ ಫಿಫಾ ಕಚೇರಿ ತಲುಪಿದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಇಲ್ಲದೇ ಹೋದಲ್ಲಿ ತಕ್ಷಣ ನಿಷೇಧಿಸಲಾಗುವುದು ಎಂದು ಬ್ಲಾಟರ್ ಹೇಳಿದ್ದರು.

ಪೆರುವಿನ ಕ್ರೀಡಾ ಇಲಾಖೆಯು ಪೆರು ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಮಾನ್ವೆಲ್ ಬುರ್ಗಾ ಅವರ ಆಯ್ಕೆಯನ್ನು ಒಪ್ಪಿಕೊಳ್ಳದಿರುವುದೇ ಸಮಸ್ಯೆ ಉಲ್ಬಣಗೊಳ್ಳಲು ಕಾರಣ. ಅವರನ್ನು ಆಯ್ಕೆಗೊಳಿಸಿದ ರೀತಿ ನ್ಯಾಯಯುತವಾಗಿಲ್ಲ ಎಂಬುದು ಸರಕಾರದ ವಾದವಾಗಿತ್ತು.

ವೆಬ್ದುನಿಯಾವನ್ನು ಓದಿ