ಫುಟ್ಬಾಲ್ : ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡಕ್ಕೆ ಜಯ

ಬುಧವಾರ, 27 ನವೆಂಬರ್ 2013 (14:10 IST)
PTI
ಆಕ್ರಮಣಕಾರಿ ಪ್ರದರ್ಶನ ತೋರಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಮಂಗಳವಾರ ಗೋವಾದಲ್ಲಿ ನಡೆದ ಐ-ಲೀಗ್ ಪಂದ್ಯದಲ್ಲಿ ಸಲ್ಗಾಂವ್ಕರ್ ಫುಟ್ಬಾಲ್ ಕ್ಲಬ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.

ಗೋವಾದ ಡೂಲರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯ 11ನೇ ಸುತ್ತಿನಲ್ಲಿ ಜಯ ಸಾಧಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು.

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸಲ್ಗಾಂವ್ಕರ್ ತಂಡ ಸ್ಥಾನ ಉಳಿಸಿಕೊಳ್ಳುವ ತವಕದಲ್ಲಿತ್ತು. ಆದರೆ, ಪಂದ್ಯದ 21ನೇ ನಿಮಿಷದಲ್ಲಿ ಪ್ರವಾಸಿ ಬೆಂಗಳೂರು ತಂಡದ ಪರ ಜಾನ್ ಮೆನಿಯಾಂಗರ್ ಗೋಲು ದಾಖಲಿಸುವ ಮೂಲಕ ಗೋವಾ ತಂಡಕ್ಕೆ ದೊಡ್ಡ ಶಾಕ್ ನೀಡಿದರು.

ಬೆಂಗಳೂರು ತಂಡ ಗೋಲು ದಾಖಲಿಸಿ ಎರಡು ನಿಮಿಷಗಳ ನಂತರ ಗೋಲು ದಾಖಲಿಸಿದ ಗೋವಾ ತಂಡದ ಗಿಲ್ಬರ್ಟ್ ಓಲಿವೀರಾ ಅವರು ಉಭಯ ತಂಡಗಳು ಸಮಬಲ ಸಾಧಿಸುವಂತೆ ನೋಡಿಕೊಂಡರು. 25 ಯಾರ್ಡ್ನಿಂದ ಗಿಲ್ಬರ್ಟ್ ದಾಖಲಿಸಿದ ಗೋಲು ಎಲ್ಲರ ಗಮನ ಸೆಳೆಯಿತು. ಆದರೆ, ಪಂದ್ಯದ 57ನೇ ನಿಮಿಷದಲ್ಲಿ ಪ್ರವಾಸಿ ಬಿಎಫ್ಸಿ ತಂಡದ ಪರ ಗೋಲು ದಾಖಲಿಸಿದ ಬೀಖಾಖೀ ಬೀಂಗೀಚೂ ಅವರು ಮುನ್ನಡೆ ತಂದುಕೊಟ್ಟರು. ಹೆಚ್ಚುವರಿ ಸಮಯದ ಮೊದಲನೇ ನಿಮಿಷದಲ್ಲಿ ಆತಿಥೇಯ ಸಾಲ್ಗಾಂವ್ಕರ್ ಡ್ರಾಗೊಳಿಸುವ ಅವಕಾಶ ಹೊಂದಿತ್ತು. ಆದರೆ, ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಲು ಗೋವಾ ತಂಡದ ಡೆರ್ರೀಲ್ ಡಫ್ಫಿ ಅವರು ವಿಫಲವಾದರು. ಹೀಗಾಗಿ ಬೆಂಗಳೂರಿಗೆ ಜಯದ ಕೇಕೆ ಹಾಕಲು ಅನುಕೂಲವಾಯಿತು.

ಬೆಂಗಳೂರು ಫುಟ್ಬಾಲ್ ಕ್ಲಬ್ ಇದುವರೆಗೂ ಆಡಿರುವ 10 ಪಂದ್ಯಗಳಿಂದ ಒಟ್ಟು 18 ಅಂಕಗಳನ್ನು ಗಳಿಸಿತು. ಸಲ್ಗಾಂವ್ಕರ್ ಫುಟ್ಬಾಲ್ ಕ್ಲಬ್ ಸಹ ಅಷ್ಟೇ ಪಂದ್ಯಗಳಿಂದ 18 ಅಂಕ ಗಳಿಸಿದೆ. ಆದರೆ, ಬೆಂಗಳೂರಿಗಿಂತ ಅಧಿಕ ಗೋಲು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ವೆಬ್ದುನಿಯಾವನ್ನು ಓದಿ