ಬಿಟ್‌ಬರ್ಗರ್ ಓಪನ್; ಚೇತನ್‌ಗೆ ನಿರಾಸೆ; ಕ್ವಾರ್ಟರ್‌ಗೆ ಪವಾರ್

ಶನಿವಾರ, 3 ಅಕ್ಟೋಬರ್ 2009 (12:51 IST)
ಜರ್ಮನಿಯಲ್ಲಿ ನಡೆಯುತ್ತಿರುವ ಬಿಟ್‌ಬರ್ಗರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಆನಂದ್ ಪವಾರ್ ಎದುರು ಆಘಾತಕಾರಿ ಸೋಲನುಭವಿಸಿದ ವಿಶ್ವ ನಂ.15 ಆಟಗಾರ ಚೇತನ್ ಆನಂದ್ ಕೂಟದಿಂದ ನಿರ್ಗಮಿಸಿದ್ದಾರೆ.

ಅದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ರೂಪೇಶ್ ಕುಮಾರ್ ಮತ್ತು ಸನಾವೆ ಥಾಮಸ್ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಉಳಿದಂತೆ ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಅರವಿಂದ್ ಭಟ್, ಮಹಿಳಾ ಸಿಂಗಲ್ಸ್‌ನಲ್ಲಿ ತೃಪ್ತಿ ಮುರ್ಗುಂಡೆ ಮತ್ತು ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಪರ್ಣಾ ಬಾಲನ್ ಹಾಗೂ ಶ್ರುತಿ ಕುರಿಯನ್ ಜೋಡಿ ನಿರಾಸೆ ಅನುಭವಿಸಿದ್ದಾರೆ.

ಚೇತನ್ ಆನಂದ್‌ಗೆ ನಿರಾಸೆ..
ಭಾರತದವರೇ ಆದ ಆನಂದ್ ಪವಾರ್ ಎದುರು ಸೋಲುಂಡಿರುವ ಅಗ್ರ ಶ್ರೇಯಾಂಕಿತ ಆಟಗಾರ ಚೇತನ್ ಆನಂದ್ ನಿರಾಸೆ ಅನುಭವಿಸಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ 11ನೇ ಶ್ರೇಯಾಂಕಿತ ಆನಂದ್ ಪವಾರ್, ಪ್ರಿ-ಕ್ವಾರ್ಟರ್ ಹೋರಾಟದಲ್ಲಿ ಚೇತನ್‌ರನ್ನು 21-16, 21-13ರಲ್ಲಿ ಮಣಿಸಿ ಅಂತಿಮ ಎಂಟರ ಘಟಕ್ಕೆ ಪ್ರವೇಶಿಸಿದರು.

ಕ್ವಾರ್ಟರ್‌ನಲ್ಲಿ ಅವರು ಐದನೇ ಶ್ರೇಯಾಂಕಿತ ಹಾಲಂಡ್‌ನ ಎರಿಕ್ ಪೆಂಗ್‌ರನ್ನು ಎದುರಿಸಲಿದ್ದಾರೆ.

ರೂಪೇಶ್-ಸನಾವೆ ಮುನ್ನಡೆ...
ಅದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಭಾರತದ ರೂಪೇಶ್ ಕೂಮಾರ್ ಮತ್ತು ಸನಾವೆ ಥಾಮಸ್ ಜೋಡಿ ಜರ್ಮನಿಯ ಮ್ಯಾಟ್ಸ್ ಹುಕ್ರೀಡೆ-ಜೋಸ್ ಜರ್ವಾನ್ ಜೋಡಿಯನ್ನು 21-9, 21-10ರ ಅಂತರದಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು.

ಅರವಿಂದ್‌ಗೆ ಸೋಲು...
ಕಳೆದ ಬಾರಿಯ ರನ್ನರ್ ಅಪ್ ವಿಜೇತ ಅರವಿಂದ್ ಭಟ್ ಕೂಡಾ ಸೋಲನುಭವಿಸಿದ್ದಾರೆ. ಹದಿನಾರರ ಘಟ್ಟದಲ್ಲಿ ಅವರು 14ನೇ ಶ್ರೇಯಾಂಕಿತ ಉಕ್ರೇನ್‌ನ ಡಿಮಿಟ್ರೊ ಜವಾಡಿಸ್ಕಿ ಎದುರು 18-21, 21-9, 17-21ರಲ್ಲಿ ಸೋಲುಂಡರು.

ಕಠಿಣ ಪೈಪೋಟಿ ನೀಡಿದ ಅರವಿಂದ್ ಎದುರಾಳಿಯನ್ನು 53 ನಿಮಿಷಗಳ ಕಾಲ ಹಿಡಿದಿರಿಸಿದರು.

ತೃಪ್ತಿ ಪರಾಜಯ...
ಕಳೆದ ವಾರವಷ್ಟೇ ಜೆಕ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟ ಆಲಂಕರಿಸಿದ್ದ ತೃಪ್ತಿ ಮುರ್ಗುಂಡೆ ಮಹಿಳಾ ಸಿಂಗಲ್ಸ್‌ನಿಂದ ಹೊರಬಿದ್ದಿದ್ದಾರೆ. ಅವರು ಬೆಲಾರೂಸ್‌ನ ಓಲ್ಗಾ ಕೊನೊನ್ ಎದುರು 24 ನಿಮಿಷಗಳ ಹೋರಾಟದ ಅಂತಿಮದಲ್ಲಿ 10-21, 9-21ರಲ್ಲಿ ಸೋಲನುಭವಿಸಿದರು.

ಅಪರ್ಣಾ-ಶ್ರುತಿ ಹೋರಾಟ ಅಂತ್ಯ...
ಅದೇ ರೀತಿ ಮಹಿಳೆಯರ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್ ಮತ್ತು ಶ್ರುತಿ ಕುರಿಯನ್ ಜೋಡಿ, ಅಗ್ರ ಶ್ರೇಯಾಂಕಿತೆ ಡೆನ್ಮಾರ್ಕ್‌ನ ಹೆಲ್ಲೆ ನೀಲ್ಸನ್ ಮತ್ತು ಮೇರಿ ರೋಪ್ಕೆ ಜೋಡಿ ಎದುರು 21-19, 21-11ರ ಅಂತರದಲ್ಲಿ ಸೋಲುಂಡಿದ್ದಾರೆ.

ವೆಬ್ದುನಿಯಾವನ್ನು ಓದಿ