ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಿಂದ ಪ್ರತಿಭಾನ್ವೇಷಣೆ

ಶನಿವಾರ, 3 ಜನವರಿ 2009 (19:43 IST)
ಇತ್ತೀಚೆಗಷ್ಟೇ ಪುಣೆಯಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್ ಸೆಮಿಫೈನಲ್ ಹಂತದಲ್ಲಿ ಕೈ ತಪ್ಪಿ ಹೋದ ಕಾರಣ ಎಚ್ಚರಗೊಂಡಿರುವ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ ಕ್ಯಾಂಪ್ ನಡೆಸುವ ಯೋಜನೆ ಕೈಗೆತ್ತಿಕೊಂಡಿದೆ. ತಿಂಗಳ ಕಾಲ ನಡೆಯಲಿರುವ ಈ ಶಿಬಿರ ಪ್ರಮುಖವಾಗಿ ಡಬಲ್ಸ್ ವಿಭಾಗದ ಬ್ಯಾಡ್ಮಿಂಟನ್ ಜೋಡಿಗಳಿಗಾಗಿ ತಲಾಶೆ ನಡೆಸಲಿದೆ.

19 ಮತ್ತು 16ರೊಳಗಿನವರ ವಿಭಾಗದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈಗಾಗಲೇ 9 ಹುಡುಗರನ್ನು ಹಾಗೂ ಇದೇ ವಿಭಾಗಕ್ಕಾಗಿ 7 ಹುಡುಗಿಯರನ್ನು ಶಿಬಿರಕ್ಕಾಗಿ ಆಯ್ಕೆ ನಡೆಸಲಾಗಿದೆ. ಜನವರಿ ಮ‌ೂರರಿಂದ ಎಂಟರವರೆಗೆ ಗುಂಟೂರಿನಲ್ಲಿ ನಡೆಯಲಿರುವ ಕಿರಿಯರ ರ‌್ಯಾಂಕಿಂಗ್ ಟೂರ್ನಮೆಂಟಿನಲ್ಲಿ ಈ ಆಟಗಾರರು ಭಾಗವಹಿಸಲಿದ್ದಾರೆ. ಗುಂಟೂರಿನಲ್ಲಿನ ಯಾವುದೇ ಪ್ರತಿಭೆಗಳಿದ್ದರೆ ಬೆಂಗಳೂರು ಶಿಬಿರಕ್ಕೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ತರಬೇತುದಾರರು ತಿಳಿಸಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಗೇಮ್ಸನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಂಪ್ ನಡೆಸಲಾಗುತ್ತದೆ ಎಂದು ಕಿರಿಯರ ವಿಭಾಗದ ಮುಖ್ಯ ತರಬೇತುದಾರ ಸಂಜೀವ್ ಸಚ್‌ದೇವ್ ಮಾಹಿತಿ ನೀಡಿದ್ದಾರೆ.

"ಆರು ತಿಂಗಳ ಹಿಂದೆ ಇದೇ ರೀತಿಯ ಶಿಬಿರವನ್ನು ಜಲಂಧರ್‌ನಲ್ಲಿಯೂ ನಡೆಸಿದ್ದೆವು. ಆದರೆ ನಮಗೆ ದೊಡ್ಡ ಗಾತ್ರದಲ್ಲಿ ಆಟಗಾರರು ಬೇಕಾಗಿದ್ದಾರೆ. ಹೊಸ ಪ್ರತಿಭೆಗಳನ್ನು ಹುಡುಕಿ ಡಬಲ್ಸ್ ವಿಭಾಗದಲ್ಲಿ ತರಬೇತಿಗೊಳಿಸುವ ಉದ್ದೇಶ ನಮ್ಮದು. ಈ ತರಬೇತಿ ಶಿಬಿರವನ್ನು ಇಂಡೋನೇಷಿಯಾದ ಕೋಚ್ ಹ್ಯಾಡಿ ಇಡ್ರಿಸ್ ನಡೆಸಿಕೊಡಲಿದ್ದಾರೆ" ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ