ಬ್ಯಾಡ್ಮಿಂಟನ್: ಭಾರತೀಯರ ಉತ್ತಮ ಆರಂಭ

ಬುಧವಾರ, 26 ನವೆಂಬರ್ 2008 (17:48 IST)
ಭಾರತದ ಅರವಿಂದ್ ಭಟ್ ತನ್ನ ಉತ್ತಮ ಪ್ರದರ್ಶನವನ್ನು ಹಾಂಕಾಂಗ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್‌ನಲ್ಲೂ ಮುಂದುವರಿಸಿದ್ದು, ವಿಶ್ವದ ನಂ.8 ಡೆನ್ಮಾರ್ಕ್‌ನ ಜೋಕಿಮ್ ಪೆರ್ಸನ್‌ರವರನ್ನು ನೇರ ಸೆಟ್‌ಗಳಿಂದ ಪರಾಭವಗೊಳಿಸಿದ್ದಾರೆ. ಜತೆಗೆ ಭಾರತದ ಎಲ್ಲಾ ಶಟ್ಲ್ ಪಟುಗಳು ಉತ್ತಮ ಆರಂಭವನ್ನೇ ತೋರಿದ್ದು, ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶ ಕಂಡಿದ್ದಾರೆ.

ಎರಡೂ ಸೆಟ್‌ಗಳಲ್ಲಿ ನೇರ ಜಯ ಸಾಧಿಸುವ ಮ‌ೂಲಕ ಅರವಿಂದ ಭಟ್ ಎದುರಾಳಿಯನ್ನು ಆಶ್ಚರ್ಯಚಕಿತನ್ನಾಗಿಸಿದರು. ಆರನೇ ಶ್ರೇಯಾಂಕದ ವಿಶ್ವದ ನಂ.8 ಡೆನ್ಮಾರ್ಕ್‌ನ ಚೋಕಿಮ್ ಪೆರ್ಸನ್ ಅವರನ್ನು 21-17, 21-17ರ ಅಂತರದಿಂದ ಮಣಿಸಿ ಭಟ್ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಬೀಜಿಂಗ್ ಒಲಿಂಪಿಕ್‌ನಲ್ಲಿ ಕ್ವಾರ್ಟರ್‌ ಫೈನಲ್ ತಲುಪಿದ್ದ ಸೈನಾ ನೆಹ್ವಾಲ್ ಉತ್ತಮ ಆರಂಭವನ್ನೇ ಭಾರತಕ್ಕೆ ಒದಗಿಸಿದ್ದಾರೆ. ಆಕೆ ಥ್ಯಾಯ್ಲೆಂಡಿನ ಸಲಕ್ಜಿತ್ ಪೊನ್ಸನಾ ಅವರನ್ನು 21-19, 22-20ರ ಅಂತರದಿಂದ 33 ನಿಮಿಷಗಳಲ್ಲಿ ಸೋಲಿಸಿದ್ದಾರೆ.

ಚೇತನ್ ಆನಂದ್ ಕೂಡ ಉತ್ತಮ ಪ್ರದರ್ಶನದ ಮ‌ೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಝೆಕ್ ಗಣರಾಜ್ಯದ ಪೆಟ್ರ್ ಕೌಕಾಲ್ ಅವರನ್ನು 21-18, 17-21, 21-13ರ ಅಂತರದಲ್ಲಿ 50 ನಿಮಿಷಗಳ ಕಾಲ ಹೋರಾಡಿ ಜಯಗಳಿಸಿದರು. ಆದರೆ ಈ ಜಯ ಅರವಿಂದ್ ಭಟ್‌ರಂತೆ ಸುಲಭವಾಗಿರದೆ ಪರದಾಡುವಂತಾಗಿತ್ತು.

ಭಾರತಕ್ಕೆ ನಿರಾಸೆ ಉಂಟಾಗಿದ್ದು ಡಬಲ್ಸ್ ವಿಭಾಗದಲ್ಲಿ ಮಾತ್ರ. ಸೈನಾ ನೆಹ್ವಾಲ್ ಮತ್ತು ಆಕೆಯ ಕೆನಡಾ ಜತೆಗಾತಿ ಅನ್ನಾ ರೈಸ್‌ರವರು ಮಲೇಷಿಯಾದ ಚಿವೂ-ಹ್ವೀ-ಹೂ ಮತ್ತು ಪೆಕ್-ಸಿಯಾಹ್-ಲಿಮ್‌ರೆದುರು ನೇರ ಸೆಟ್‌ಗಳಿಂದ ಪರಾಜಯ ಅನುಭವಿಸಬೇಕಾಯಿತು. ಎದುರಾಳಿಗಳು ಸೈನಾ ಜೋಡಿಯನ್ನು 16-21, 11-21ರ ಅಂತರದಿಂದ 27 ನಿಮಿಷಗಳಲ್ಲಿ ಸೋಲೊಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದರು.

ವೆಬ್ದುನಿಯಾವನ್ನು ಓದಿ