ಭಾರತದ ಕೈತಪ್ಪಲಿರುವ 2010ರ ಕಾಮನ್‌ವೆಲ್ತ್?

ಶುಕ್ರವಾರ, 14 ನವೆಂಬರ್ 2008 (16:34 IST)
ಭಾರತಕ್ಕೆ ಸಿಕ್ಕ ಕಾಮನ್‌ವೆಲ್ತ್ ಗೇಮ್ಸ್ 2010ರ ಆಯೋಜನೆಯ ಅವಕಾಶ ತಪ್ಪಿ ಹೋಗುವ ಸಾಧ್ಯತೆಯಿದೆಯೆಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ನಿರ್ಮಾಣವಾಗಬೇಕಿರುವ ಕ್ರೀಡಾ ಗ್ರಾಮ ವಿವಾದಕ್ಕೀಡಾಗಿದ್ದು ಈ ಹಿನ್ನಲೆಯಲ್ಲಿ ಇಂತಹ ಹೇಳಿಕೆಗಳು ಹೊರಬಿದ್ದಿವೆ.

2010ರ ಅಕ್ಟೋಬರ್ ಮ‌ೂರರಿಂದ 14ರವರೆಗೆ ನಡೆಯಬೇಕಿರುವ ಕಾಮನ್‌ವೆಲ್ತ್ ಗೇಮ್ಸ್‌‌ಗಾಗಿ ಹಲವು ದೇಶಗಳಿಂದ 71 ತಂಡಗಳು ಆಗಮಿಸಲಿದ್ದು, ಅದಕ್ಕಾಗಿ ಕ್ರೀಡಾ ಗ್ರಾಮ ನಿರ್ಮಾಣವಾಗಬೇಕಿತ್ತು. ಆದರೆ ಪರಿಸರವಾದಿಗಳಿಂದ ಎದುರಿಸುತ್ತಿರುವ ತೀವ್ರ ಪ್ರತಿಭಟನೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಯಮುನಾ ನದಿ ತೀರದಲ್ಲಿ ಕಟ್ಟಬೇಕಿದ್ದ ಕ್ರೀಡಾ ಗ್ರಾಮದಲ್ಲಿ ಸುಮಾರು 8,500 ತಾತ್ಕಾಲಿಕ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಇದೀಗ ದೆಹಲಿ ಉಚ್ಚ ನ್ಯಾಯಾಲಯ ಇದರ ಬಗ್ಗೆ ಪರಿಸರ ತಜ್ಞರ ಅಭಿಪ್ರಾಯ ಕೇಳಿದ್ದು, ಒಂದು ವೇಳೆ ಹಾನಿಕಾರಕ ಎಂಬ ವರದಿಗಳನ್ನು ಅವರು ಕೊಟ್ಟಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ರದ್ದಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆಗಳು ಅಷ್ಟಕ್ಕೇ ಸೀಮಿತವಾಗಿಲ್ಲ. ಗೇಮ್ಸ್ ಆರಂಭವಾಗಲು ಇನ್ನು ಕೇವಲ ಎರಡೇ ವರ್ಷ ಅಂತರವಿರುವಾಗ ಸಿದ್ಧತೆಗಳು ಆರಂಭಿಕ ಹಂತದಲ್ಲೇ ಇವೆ. ವೆಲೋಡ್ರೋಮ್ ನಿರ್ಮಾಣ ಇನ್ನೂ ಶುರು ಮಾಡಿಲ್ಲ. ಮ‌ೂಲಸೌಕರ್ಯಗಳು ಪ್ರಾಥಮಿಕ ಹಂತದಲ್ಲೇ ಬಾಕಿ ಉಳಿದಿವೆ. ಇದರ ಜತೆಗೆ ಪರಿಸರ ಮಾಲಿನ್ಯ ಬೆದರಿಕೆಯನ್ನೂ ಕ್ರೀಡಾಕೂಟ ಎದುರಿಸುತ್ತಿದೆ. ಹಾಗಾಗಿ ಕಾಮನ್‌ವೆಲ್ತ್ ಗೇಮ್ಸ್‌ ಭಾರತದಲ್ಲಿ ನಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂಬುದು ಗೇಮ್ಸ್ ಅಧಿಕಾರಿಗಳ ಅಭಿಪ್ರಾಯ.

ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಅಂತ್ಯಗೊಂಡರೆ ಮಾತ್ರ ಕಾಮನ್‌ವೆಲ್ತ್ ಗೇಮ್ಸ್‌ ಭಾರತದಲ್ಲಿ ನಡೆಯಬಹುದು. ಒಂದು ವೇಳೆ ಗೇಮ್ಸ್ ಪ್ರಾಯೋಜಕತ್ವ ಭಾರತದ ಕೈತಪ್ಪಿದಲ್ಲಿ ಅದಕ್ಕೆ ಅಧಿಕಾರಿ ವರ್ಗ ಮತ್ತು ಸರಕಾರಗಳ ಬೇಜವಾಬ್ದಾರಿಯೇ ಕಾರಣ ಎಂಬುವುದು ಕ್ರೀಡಾ ಪ್ರೇಮಿಗಳ ಆಕ್ರೋಶ.

ವೆಬ್ದುನಿಯಾವನ್ನು ಓದಿ