ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ ನಿಷೇಧ ಸಾಧ್ಯತೆ: ಎಫ್‌ಐಎಚ್

ಶುಕ್ರವಾರ, 30 ಸೆಪ್ಟಂಬರ್ 2011 (16:37 IST)
PTI
ಹಾಕಿ ಇಂಡಿಯಾ ಮತ್ತು ಇಂಡಿಯನ್ ಹಾಕಿ ಫೆಡರೇಶನ್ ಮಧ್ಯದ ವಿವಾದವನ್ನು ಅಂತ್ಯಗೊಳಿಸದಿದ್ದಲ್ಲಿ, ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ನಿಷೇಧ ಹೇರಲಾಗುವುದು ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ಹಾಕಿ ಇಂಡಿಯಾ ಮತ್ತು ಇಂಡಿಯನ್ ಹಾಕಿ ಫೆಡೇಶನ್ ವಿಲೀನಗೊಳ್ಳುವಂತೆ ಕೇಂದ್ರ ಕ್ರೀಡಾ ಸಚಿವಾಲಯದ ಪರವಾಗಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಕಾರ್ಯನಿರ್ವಹಿಸುವುದಿಲ್ಲ ಎಂದು ಎಫ್‌ಐಎಚ್ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಎಫ್‌ಐಎಚ್ ಅಧ್ಯಕ್ಷ ಲಿಯಾಂಡ್ರೊ ನೆಗ್ರೆ ಮಾತನಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ಆಯ್ಕೆ ಮಾಡುವ ಅಧಿಕಾರ ಕೇವಲ ಹಾಕಿ ಇಂಡಿಯಾಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿ ಆಯೋಜನೆಗಾಗಿ ಎಫ್‌ಐಎಚ್ ಸಂಸ್ಥೆ ನೀಡಬೇಕಾಗಿರುವ ಹಣವನ್ನು ಕೂಡಾ ಇತ್ಯರ್ಥಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಮನವಿ ಮಾಡಿದೆ.

ಹಾಕಿ ಮಂಡಳಿಗಳ ವಿಲೀನ ಮತ್ತು ಬಾಕಿ ಮೊತ್ತವನ್ನು ಭಾರತ ಸರಕಾರ ಸಂದಾಯ ಮಾಡಿದಲ್ಲಿ ಮುಂದಿನ ವರ್ಷದಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಅಡ್ಡಿ ಆತಂಕಗಳು ಎದುರಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಅಧ್ಯಕ್ಷ ಲಿಯಾಂಡ್ರೊ ನೆಗ್ರಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ