ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್

ಬುಧವಾರ, 17 ಡಿಸೆಂಬರ್ 2008 (12:55 IST)
ಆರು ಗ್ರಾಂಡ್ ಮಾಸ್ಟರ್ಸ್ ಮತ್ತು ಎಂಟು ಅಂತಾರಾಷ್ಟ್ರೀಯ ಮಾಸ್ಟರ್ಸ್ ಸೇರಿದಂತೆ ಒಟ್ಟು 14 ಮಂದಿ ಚೆಸ್ ಆಟಗಾರರು ಮಂಗಳೂರಿನಲ್ಲಿ ಇಂದಿನಿಂದ ಆರಂಭಗೊಂಡಿರುವ 46ನೇ ರಾಷ್ಟ್ರೀಯ 'ಎ' ಕ್ಲಾಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಸಕ್ತ ರಾಷ್ಟ್ರೀಯ ಚಾಂಪಿಯನ್ ಆಗಿರುವ ಬಂಗಾಲದ ಸೂರ್ಯ ಶೇಖರ್ ಗಂಗೂಲಿ, ದೆಹಲಿಯ ಪರಿಮಾರ್ಜನ್ ನೇಗಿ, ಕೇರಳದ ಜಿ.ಎನ್. ಗೋಪಾಲ್, ಪಶ್ಚಿಮ ಬಂಗಾಲದ ನೀಲೋತ್ಪಲ್ ದಾಸ್, 2006ರ ಕಾಮನ್‌ವೆಲ್ತ್ ಚೆಸ್ ಸ್ವರ್ಣ ವಿಜೇತ ತಮಿಳುನಾಡಿನ ದೀಪನ್ ಚಕ್ರವರ್ತಿ, ಮಾಜಿ ರಾಷ್ಟ್ರೀಯ ಚಾಂಪಿಯನ್ ಮಹಾರಾಷ್ಟ್ರದ ಪ್ರವೀಣ್ ತಿಪ್ಸಾಯ್ ಗ್ರಾಂಡ್‌ ಮಾಸ್ಟರ್ಸ್ ವಿಭಾಗದಿಂದ ಸ್ಪರ್ಧೆಯಲ್ಲಿದ್ದಾರೆ.

ಅದೇ ರೀತಿ ಅಂತಾರಾಷ್ಟ್ರೀಯ ಮಾಸ್ಟರ್ಸ್ ತಂಡದಲ್ಲಿ ತಮಿಳುನಾಡಿನ ಬಿ. ಅದಿಭನ್, ಸತ್ಯಪ್ರಗ್ಯಾನ್, ಶ್ಯಾಮ್ ಸುಂದರ್ ಮತ್ತು ಪೊನ್ನುಸ್ವಾಮಿ ಕೊಂಗಾವೆಲ್, ಕೇರಳದ ಕೆ. ರತ್ನಕರಣ್, ದೆಹಲಿಯ ಶ್ರೀರಾಮ್ ಝಾ, ಕರ್ನಾಟಕದ ಎಂ.ಎಸ್. ತೇಜಕುಮಾರ್, ಮಹಾರಾಷ್ಟ್ರದ ಅಕ್ಷಯ್ ರಾಜ್ ಕೋರ್ ಸ್ಪರ್ಧೆಯಲ್ಲಿದ್ದಾರೆ.

ಒಟ್ಟು 13 ಸುತ್ತುಗಳಿರುವ ಈ ಟೂರ್ನಮೆಂಟಿನಲ್ಲಿ ರಾಬಿನ್ ಫಾರ್ಮಾಟ್ ಅನುಸರಿಸಲಾಗುತ್ತದೆ. ಚೆನ್ನೈಯ ಅನಂತ್‌ರಾಮ್ ಮುಖ್ಯ ತೀರ್ಪುಗಾರರಾಗಿದ್ದು, ಚಾಂಪಿಯನ್‌ಶಿಪ್ ಪ್ರಶಸ್ತಿ ನಾಲ್ಕು ಲಕ್ಷ ರೂಪಾಯಿ ಬಹುಮಾನವನ್ನೊಳಗೊಂಡಿದೆ. ಇದನ್ನು ಅಗ್ರ ಐವರು ಆಟಗಾರರು ಹಂಚಿಕೊಳ್ಳಲಿದ್ದಾರೆ.

ಇಲ್ಲಿ ಮ‌ೂಡಿ ಬರುವ ಅಗ್ರ ಆರು ಮಂದಿ ಆಟಗಾರರು ಮುಂದಿನ ವಿಶ್ವ, ಏಷಿಯನ್, ಒಲಿಂಪಿಯಾಡ್ ಮತ್ತು ಇತರ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್‌ಗಳಲ್ಲಿ
ಭಾರತದ ಹಿರಿಯರ ಚೆಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ