ರಾಜ್ಯ ಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿ

ಸೋಮವಾರ, 25 ನವೆಂಬರ್ 2013 (12:18 IST)
PR
ತಾಲೂಕಿನ ಕೆರಗೋಡು ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಧಾರವಾಡ ಜಿಲ್ಲೆ ಮತ್ತು ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟ್ರೋಫಿ ಮುಡಿಗೇರಿಸಿಕೊಂಡಿವೆ.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಮಂಡ್ಯ ಜಿಲ್ಲಾ ತಂಡದ ವಿರುದ್ಧ 22-17 ಅಂಕಗಳ ಅಂತರದಲ್ಲಿ ಜಯ ಗಳಿಸಿದ ಮಡಿಕೇರಿ ತಂಡ, ಬೆಂಗಳೂರು ಉತ್ತರದ ವಿರುದ್ಧ 16 - 35 ಅಂಕಗಳಿಂದ ಧಾರವಾಡ ತಂಡ ಗೆಲವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ನಂತರ ನಡೆದ ಫೈನಲ್ ಪಂದ್ಯದಲ್ಲಿ ಮಡಿಕೇರಿ ತಂಡದ ವಿರುದ್ಧ 14 - 20 ಅಂಕಗಳ ಅಂತರದಿಂದ ಧಾರವಾಡ ಜಿಲ್ಲಾ ತಂಡ ಜಯ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಡಿಕೇರಿ ತಂಡ ರನ್ನರ್ ಅಪ್‌ಗೆ ತೃಪ್ತಿ ಪಡೆದುಕೊಂಡಿತು.

ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಮಂಡ್ಯ ಜಿಲ್ಲಾ ತಂಡ 39 - 32 ರಿಂದ ಉಡುಪಿ ತಂಡದ ಎದುರು ಗೆಲವು ಸಾಧಿಸಿತು. ಬೆಂಗಳೂರು ದಕ್ಷಿಣದ ವಿರುದ್ಧ ಮಂಗಳೂರು 16 -61 ರಲ್ಲಿ ಜಯ ಗಳಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

ನಂತರ ಫೈನಲ್ ಪಂದ್ಯದಲ್ಲಿ ಮಂಗಳೂರು ಜಿಲ್ಲಾ ತಂಡ 42-11 ಅಂಕಗಳ ಅಂತರದಿಂದ ಮಂಡ್ಯ ಜಿಲ್ಲಾ ತಂಡವನ್ನು ಸುಲಭವಾಗಿ ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತು.ಮಂಡ್ಯ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಯಾಯಿತು.

ಬಾಲಕರ ವಿಭಾಗದಲ್ಲಿ ಉತ್ತಮ ಕ್ಯಾಚರ್ ಆಗಿ ಮಡಿಕೇರಿಯ ತವನ್, ಉತ್ತಮ ರೈಡರ್ ಆಗಿ ಧಾರವಾಡದ ಭರತ್ ಕುಮಾರ್, ಉತ್ತಮ ಆಲ್ ರೌಂಡರ್ ಆಗಿ ಧಾರವಾಡದ ರಾಮಚಂದ್ರ ಮೈಕಾಳಿ ವೈಯಕ್ತಿಕ ಪ್ರಶಸ್ತಿ ಪಡೆದರು.

ಬಾಲಕಿಯರ ವಿಭಾಗದಲ್ಲಿ ಉತ್ತಮ ಕ್ಯಾಚರ್ ಆಗಿ ಮಂಗಳೂರಿನ ಇಂಚರ. ಕೆ.ಶೆಟ್ಟಿ, ಉತ್ತಮ ರೈಡರ್ ಆಗಿ ಮಂಡ್ಯದ ಹೇಮಲತಾ, ಉತ್ತಮ ಆಲ್ ರೌಂಡರ್ ಆಗಿ ಮಂಡ್ಯದ ಸೌಮ್ಯ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.

ವೆಬ್ದುನಿಯಾವನ್ನು ಓದಿ