ವಿದೇಶದಲ್ಲಿ ಮೊದಲ ಬಾರಿಗೆ ಐಟಿಎಫ್ ಪ್ರಶಸ್ತಿ ಗೆದ್ದ ಯೂಕಿ

ಸೋಮವಾರ, 24 ಅಕ್ಟೋಬರ್ 2011 (12:10 IST)
PTI
ಕಳೆದ ವಾರವಷ್ಟೆ ರಾಷ್ಟ್ರೀಯ ಚಾಂಪಿಯನ್ನರಾಗಿ ಹೊರಹೊಮ್ಮಿದ್ದ ಯೂಕಿ ಭಾಂಭ್ರಿ, ಇದೀಗ ನೈಜೇರಿಯಾದಲ್ಲಿ ನಡೆದ ಐಟಿಎಫ್ ಫ್ಯೂಚರ್ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ

ಐಟಿಎಫ್ ಫ್ಯೂಚರ್ ಸಿಂಗಲ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಮ್ಮದಕ್ಷಿಣ ಆಫ್ರಿಕಾ ಎದುರಾಳಿ ರುವಾನ್ ರೊಯಿಲೊಫ್ಸೆ ವಿರುದ್ಧ 7-5, 7-5 ಸೆಟ್‌ಗಳ ಅಂತರದಿಂದ ಜಯಗಳಿಸಿದ್ದಾರೆ.

ಐದನೇ ಶ್ರೇಯಾಂಕಿತ ಭಾಂಭ್ರಿ, ಸುಮಾರು ಎರಡು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 15,000 ಡಾಲರ್ ಬಹುಮಾನ ಮೊತ್ತದ ಪಂದ್ಯಾವಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಿಶ್ವ ಎಟಿಪಿ ಶ್ರೇಯಾಂಕದಲ್ಲಿ 479ನೇ ಶ್ರೇಯಾಂಕ ಪಡೆದಿರುವ ಭಾಂಭ್ರಿ, ಇದೀಗ, ಪಂದ್ಯಾವಳಿಯ ಗೆಲುವಿನೊಂದಿಗೆ ಟಾಪ್ -400ರಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಎಟಿಪಿ ಮೂಲಗಳು ತಿಳಿಸಿವೆ.

19 ವರ್ಷ ವಯಸ್ಸಿನ ಭಾಂಭ್ರಿ, 2009 ಮತ್ತು 2010ರ ಅವಧಿಯಲ್ಲಿ ಟಾಪ್-350ರಲ್ಲಿ ಸ್ಥಾನ ಪಡೆದಿದ್ದರು. ಆದರೆ, ಗಾಯಗಳಿಂದಾಗಿ ವಿಶ್ರಾಂತಿ ಪಡೆದಿದ್ದರಿಂದ ಶ್ರೇಯಾಂಕದಲ್ಲಿ ಕುಸಿತ ಕಂಡಿತ್ತು.

2009ರಿಂದ ಇಲ್ಲಿಯವರೆಗೆ ಐದು ಐಟಿಎಫ್ ಪ್ರಶಸ್ತಿಗಳನ್ನು ಪಡೆಯುವಲ್ಲಿ ಯೂಕಿ ಭಾಂಭ್ರಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ