ವುಡ್ಸ್ ಪ್ರಕರಣ; ಟ್ಯಾಬ್ಲಾಯ್ಡ್‌ಗಳ ವಿರುದ್ಧ ಯುಚಿಟೆಲ್ ಆಕ್ರೋಶ

ಸೋಮವಾರ, 30 ನವೆಂಬರ್ 2009 (18:10 IST)
ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಜತೆ ತನ್ನ ಹೆಸರನ್ನು ಸೇರಿಸಿ ಗಾಸಿಪ್ ಹುಟ್ಟಿಸಿದವರ ವಿರುದ್ಧ ಆಕ್ರೋಶಗೊಂಡಿರುವ ರಚೆಲ್ ಯುಚಿಟೆಲ್ ಇದೀಗ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಈ ಸಂಬಂಧ ಲಾಸ್ ಎಂಜಲೀಸ್‌ನ ಪ್ರಖ್ಯಾತ ವಕೀಲರನ್ನು ಅವರು ಸಂಪರ್ಕಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ವುಡ್ಸ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಇದಕ್ಕೆ ಪರೋಕ್ಷ ಕಾರಣ ಯುಚಿಟೆಲ್ ಎಂದು ಅಮೆರಿಕನ್ ಟಾಬ್ಲಾಯ್ಡ್ ಪತ್ರಿಕೆಗಳು ಪುಂಖಾನುಪುಂಖವಾಗಿ ಬರೆದಿದ್ದವು.

ವುಡ್ಸ್‌ಗೆ ಯುಚಿಟೆಲ್ ಜತೆ ಅಕ್ರಮ ಸಂಬಂಧ ಹೊಂದಿದ್ದನ್ನು ಅವರ ಪತ್ನಿ ಪ್ರಶ್ನಿಸಿ ಹಲ್ಲೆ ನಡೆಸಿದ್ದರು. ಇದೇ ಕಾರಣದಿಂದ ಗಾಯಗೊಂಡು ಖಿನ್ನನಾಗಿದ್ದ ವುಡ್ಸ್ ಗಾಲ್ಫ್ ಬ್ಯಾಟಿನಿಂದ ಕಾರಿನ ಗಾಜನ್ನು ಒಡೆದು ಹಾಕಿದ್ದರು. ಬಳಿಕ ಕಾರನ್ನು ಚಲಾಯಿಸಿಕೊಂಡು ಹೊರಗೆ ಹೋಗಿದ್ದ ಅವರು ಮನೆಯ ಪಕ್ಕದಲ್ಲೇ ಅಪಘಾತಕ್ಕೀಡಾಗಿದ್ದರು ಎಂದು ವರದಿ ಮಾಡಲಾಗಿತ್ತು.

ಇದರಿಂದ ನೊಂದಿರುವ ಯುಚಿಟೆಲ್ ಗಾಳಿ ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ವಿರುದ್ಧ ಪೌಲ್ ಜೋನ್ಸ್ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣ ಮತ್ತು ಒಜೆ ಸಿಂಪ್ಸನ್ ಪ್ರಕರಣದಲ್ಲಿ ವಾದಿಸಿದ್ದ ಸೆಲೆಬ್ರಿಟಿ ವಕೀಲ ಗ್ಲೋರಿಯಾ ಆಲ್ರೆಡ್‌ರನ್ನು ಭೇಟಿಯಾಗಿರುವ ಯುಚಿಟೆಲ್ ಸಮಾಲೋಚನೆ ನಡೆಸಿದ್ದಾರೆ.

ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ನಾನು ಅವರ ಹೆಂಡತಿಯಾಗಿದ್ದರೂ ಇಂತಹ ಘಟನೆಗಳಿಂದ ಮನೆಯಲ್ಲಿ ಅಶಾಂತಿ ನೆಲೆಸುವುದು ಖಂಡಿತ. ನಾನಾಗಿದ್ದರೆ ಅವರನ್ನು ಕೊಂದೇ ಬಿಡುತ್ತಿದ್ದೆನೋ ಏನೋ ಎಂದು ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಯುಚಿಟೆಲ್ ಪ್ರತಿಕ್ರಿಯಿಸಿದ್ದಾರೆ.

ಇದೇ ವರ್ಷದ ಜೂನ್ ತಿಂಗಳಲ್ಲಿ ವುಡ್ಸ್‌ರನ್ನು ಮೊದಲ ಬಾರಿಗೆ ಭೇಟಿಯಾಗಿರುವುದನ್ನು ಇದೇ ಸಂದರ್ಭದಲ್ಲಿ ಯುಚಿಟೆಲ್ ಒಪ್ಪಿಕೊಂಡಿದ್ದಾರೆ. ಆದರೆ ಅಮೆರಿಕನ್ ಟ್ಯಾಬ್ಲಾಯ್ಡ್‌ಗಳ ಪ್ರಕಾರ ವುಡ್ಸ್‌ರ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ಆಕೆ ಭೇಟಿಯಾಗಿದ್ದರು. ಇದನ್ನು ಕೂಡ ಅರೆ-ಬರೆ ಒಪ್ಪಿಕೊಳ್ಳುವ ಆಕೆ, ತಾವು ಒಂದೇ ಹೊಟೇಲಿನಲ್ಲಿ ಉಳಿದುಕೊಂಡದ್ದು ಹೌದು; ಆದರೆ ಮಾಡಬಾರದ್ದನ್ನು ಏನೂ ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ವರದಿಗಳು ಸಂಪೂರ್ಣ ಆಧಾರರಹಿತವಾಗಿವೆ. ನಮಗೆ ಯಾವುದೇ ರೀತಿಯ ಸಂಬಂಧವಾಗಲೀ, ಫೋನ್ ಮಾತುಕತೆಯಾಗಲೀ, ಸಂದೇಶ ಕಳುಹಿಸುವುದಾಗಲೀ ಅಥವಾ ಬೇರಾವುದೇ ರೀತಿಯಲ್ಲೂ ಸಂಪರ್ಕವಿಲ್ಲ. ನನ್ನ ಹೆಸರನ್ನು ಮನ ಬಂದಾಗಲೆಲ್ಲ ಬೇರೆಯವರ ಹೆಸರಿನ ಜತೆ ಬಳಸುತ್ತಿರುವುದು ನನಗೆ ಅಸಮಾಧಾನ ಉಂಟು ಮಾಡಿದ್ದು, ಇದ್ಯಾವುದೂ ನಿಜವಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

2004ರಲ್ಲಿ ತನ್ನ ಬಾಲ್ಯದ ಗೆಳೆಯ, ವಾಲ್ ಸ್ಟ್ರೀಟ್ ಉದ್ಯಮಿ ಸ್ಟೀವನ್ ಎರೆಂಕ್ರಾಂಜ್‌ರನ್ನು ವಿವಾಹವಾಗಿದ್ದ ಯುಚಿಟೆಲ್ ದಾಂಪತ್ಯ ಕೇವಲ ನಾಲ್ಕೇ ತಿಂಗಳಲ್ಲಿ ಮುರಿದು ಬಿದ್ದಿತ್ತು.

ಡೈವೋರ್ಸ್ ಪಡೆದುಕೊಂಡ ಆಕೆ ವಿಶ್ವ ವ್ಯಾಪಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಪ್ರೀತಿಸುತ್ತಿದ್ದ ವಿಚಾರ ಆಲ್ ಖೈದಾ ವಿಮಾನ ಡಿಕ್ಕಿ ಹೊಡೆಸಿದಾಗ ಬಹಿರಂಗವಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

ಬಳಿಕ ಮತ್ತೊಬ್ಬ ಮದುವೆಯಾಗಿರುವ ನಟ ಡೇವಿಡ್ ಬೊರೆನಾಜ್ ಜತೆ ಯುಚಿಟೆಲ್ ಸಂಬಂಧ ಕಲ್ಪಿಸಲಾಯಿತು. ಈಗ ವುಡ್ಸ್ ಜತೆ ಸಂಬಂಧ ಕಟ್ಟಲಾಗುತ್ತಿದೆ. ಹೀಗೆ ಮದುವೆಯಾಗಿರುವವರ ಜತೆ ಸಂಬಂಧ ಹುಟ್ಟು ಹಾಕುತ್ತಿರುವ ಪತ್ರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದೇನೆ ಎಂದು ಯುಚಿಟೆಲ್ ಆಕ್ರೋಶಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ