ಸೈನಾ ನಂಬರ್ ವನ್ ಆಗಲಿದ್ದಾರೆ: ಪಡುಕೋಣೆ

ಸೋಮವಾರ, 17 ನವೆಂಬರ್ 2008 (18:27 IST)
ಭಾರತದ ಯುವ ಪ್ರತಿಭೆ ಸೈನಾ ನೆಹ್ವಾಲ್ ಇನ್ನು ಮ‌‌ೂರು ವರ್ಷಗಳಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿಯಾಗುತ್ತಾರೆ ಎಂದು ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಅಭ್ರಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನ 17ರ ಸೈನಾ ಒಬ್ಬ ಚಾಂಪಿಯನ್‌ರಲ್ಲಿರಬೇಕಾದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ. ದೈಹಿಕ, ತಾಂತ್ರಿಕ, ಮಾನಸಿಕ ಮತ್ತು ಆತ್ಮವಿಶ್ವಾಸವೆಲ್ಲವೂ ಸೈನಾರಲ್ಲಿರುವುದರಿಂದ ಆಕೆ ನಂಬರ್ ವನ್ ಸ್ಥಾನಕ್ಕೇರಲಿದ್ದಾರೆ ಎಂದು ಪಡುಕೋಣೆ ಭವಿಷ್ಯ ನುಡಿದಿದ್ದಾರೆ.

"ತನ್ನ ಕಠಿಣ ಪರಿಶ್ರಮವನ್ನು ಮುಂದವರಿಸಿದರೆ ಅವರು ಅಗ್ರ ಸ್ಥಾನದಲ್ಲಿಲ್ಲದಿರಲು ಸಾಧ್ಯವೇ ಇಲ್ಲ" ಎಂದು ವಿಶ್ವಕಪ್ ಮಾಜಿ ವಿಜೇತ ಸಂದರ್ಶನವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ರೀತಿ ಹೇಳಿದರು.

"ಅದು ಸಾಧ್ಯವಿದೆ. ಯಾಕೆಂದರೆ ಆಕೆ ಈಗಾಗಲೇ ವಿಶ್ವ ರ‌್ಯಾಂಕಿಂಗ್‌ನ 11ನೇ ಸ್ಥಾನದಲ್ಲಿದ್ದಾರೆ. ಇನ್ನೇನು 10ರೊಳಗೆ ಕಾಣಿಸಿಕೊಳ್ಳಬಹುದು. ನನ್ನ ಪ್ರಕಾರ ವರ್ಷದೊಳಗೆ ಆಕೆ ಟಾಪ್ ಐದರೊಳಗೆ ಸ್ಥಾನ ಪಡೆದುಕೊಳ್ಳುತ್ತಾರೆ. ಎರಡು ಮ‌ೂರು ವರ್ಷದೊಳಗೆ ಆಕೆ ನಂಬರ್ ವನ್ ಸ್ಥಾನ ತನ್ನದಾಗಿಸಿಕೊಳ್ಳಲಿದ್ದಾರೆ" ಎಂದು ಖಡಾಖಂಡಿತವಾಗಿ ವಿಶ್ವಾಸ ವ್ಯಕ್ತಪಡಿಸುತ್ತಾರೆ ಪ್ರಕಾಶ್ ಪಡುಕೋಣೆ.

ವೆಬ್ದುನಿಯಾವನ್ನು ಓದಿ