ಹಾಕಿ ಕ್ರೀಡೆಯ ಭವಿಷ್ಯಕ್ಕಾಗಿ ನಮ್ಮ ಹೋರಾಟ

ಮಂಗಳವಾರ, 12 ಜನವರಿ 2010 (18:21 IST)
ಹಾಕಿ ಇಂಡಿಯಾ ಫೆಡರೇಶನ್ ವೇತನ ಹಾಗೂ ಪ್ರೋತ್ಸಾಹ ಧನ ನೀಡುವ ಕುರಿತಂತೆ ಯಾವುದೇ ಖಚಿತ ಭರವಸೆ ನೀಡಿಲ್ಲ. ಫೆಡರೇಶನ್ ಒಂದು ವೇಳೆ ಆರ್ಥಿಕ ಕೊರತೆಯಿಂದ ಬಳಲುತ್ತಿದ್ದಲ್ಲಿ, ಮುಂಬರುವ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸ್ವಂತ ವೆಚ್ಚ ಭರಿಸಿ ಆಡಲು ಸಿದ್ಧರಾಗಿರುವುದಾಗಿ ರಾಷ್ಟ್ರೀಯ ಹಾಕಿ ತಂಡದ ಆಟಗಾರರು ಹೇಳಿದ್ದಾರೆ.

ರಾಷ್ಟ್ರೀಯ ಹಾಕಿ ತಂಡದ ಪ್ರಾಯೋಜಕತೆಯನ್ನು ವಹಿಸಿಕೊಂಡಿರುವ ಸಹಾರಾ ಸಂಸ್ಥೆ, 2011ರ ವರೆಗಿನ ಹಣವನ್ನು ಫೆಡರೇಶನ್‌ಗೆ ಪಾವತಿಸಿದೆ. ಯಾವುದನ್ನು ಪಡೆಯಬೇಕಾದರೂ ಸಮಯ ಮೀರಿದ ನಂತರ ದೊರೆಯುತ್ತದೆ ಎಂದು ಆಟಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಾವು ಎಂದೂ ಹಣಕ್ಕೆ ಆದ್ಯತೆ ನೀಡಿದವರಲ್ಲ. ರಾಷ್ಟ್ರಕ್ಕೆ ಆದ್ಯತೆ ನೀಡುತ್ತೇವೆ. ಕಳೆದ ಹಲವಾರು ವರ್ಷಗಳಿಂದ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಒಂದು ವೇಳೆ ಹಾಕಿ ಇಂಡಿಯಾ ಅನುಮತಿ ನೀಡಿದಲ್ಲಿ ನಾವು ಸ್ವಂತ ವೆಚ್ಚದಲ್ಲಿ ಆಡಲು ಸಿದ್ಧರಾಗಿದ್ದೇವೆ ಎಂದು ಮಾತುಕತೆ ವಿಫಲವಾದ ನಂತರ ಆಟಗಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಹಾಕಿ ಇಂಡಿಯಾ ತಮಗೆ ವೇತನವನ್ನು ಪಾವತಿಸುವ ಭರವಸೆ ನೀಡಿತ್ತು. ಆದರೆ ಹಿಂಬಾಕಿ ಪಾವತಿಸಲು ಹಿಂದೇಟು ಹಾಕುತ್ತಿರುವುದರಿಂದ, ತಂಡದ ಪ್ರಾಯೋಜಕರನ್ನು ಸಂಪರ್ಕಿಸಲು ಸಿದ್ಧತೆ ನಡೆಸಲಾಗುತ್ತಿದೆ. ಹಾಕಿ ಇಂಡಿಯಾ ಫೆಡರೇಶನ್ ವೇತನ ಪಾವತಿ ಕುರಿತಂತೆ ನಮಗೆ ಖಚಿತ ಭರವಸೆ ನೀಡುತ್ತಿಲ್ಲವಾದ್ದರಿಂದ, ಬೇಡಿಕೆ ಈಡೇರುವವರೆಗೆ ಶಿಬಿರವನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಹಾಕಿ ಇಂಡಿಯಾ ಒಂದು ವೇಳೆ ಆರ್ಥಿಕ ಕೊರತೆಯಿಂದ ಬಳಲುತ್ತಿದ್ದಲ್ಲಿ, ಲೆಕ್ಕದ ವಿವರಗಳನ್ನು ಬಹಿರಂಗಪಡಿಸದಿರಲು ಕಾರಣವೇನು? ಎಂದು ತಂಡದ ಆಟಗಾರರು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ