ಹಾಕಿ: ಭಾರತ ಪ್ರವಾಸಕ್ಕೆ ಪಾಕ್ ಸಿದ್ಧ

ಶುಕ್ರವಾರ, 5 ಡಿಸೆಂಬರ್ 2008 (13:23 IST)
ಮುಂದಿನ ವರ್ಷದ ಜನವರಿಯಲ್ಲಿ ಚಂಡೀಗಢ ಮತ್ತು ಜಲಂಧರ್‌ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ನಡುವಿನ ಹಾಕಿ ಪಂದ್ಯಾವಳಿಗೆ ಪಾಕಿಸ್ತಾನ ತಂಡ ಸಿದ್ಧವಾಗಿದ್ದು, ಪ್ರವಾಸಕ್ಕೆ ಅಲ್ಲಿನ ಸರಕಾರ ಒಪ್ಪಿಗೆ ಸೂಚಿಸಿದೆ.

ಭಾರತಕ್ಕೆ ಪ್ರವಾಸ ಮಾಡಲು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಷನ್‌ನ ಕಾರ್ಯದರ್ಶಿ ಆಸಿಫ್ ಬಾಜ್ವಾ ಗುರುವಾರ ಪತ್ರಕರ್ತರಿಗೆ ತಿಳಿಸಿದ್ದಾರೆ.

"ಮುಂದಿನ ವರ್ಷದ ಜನವರಿ 31ರಿಂದ ಭಾರತದಲ್ಲಿ ಆರಂಭವಾಗಲಿರುವ ನಾಲ್ಕು ರಾಷ್ಟ್ರಗಳ ನಡುವಿನ ಟೂರ್ನಮೆಂಟಿಗಾಗಿ ಪಾಕಿಸ್ತಾನ ತಂಡ ಪ್ರವಾಸ ಕೈಗೊಳ್ಳಲಿದೆ. ಇದರಿಂದ ಆಟಗಾರರಿಗೆ ತುಂಬಾ ಸಂತೋಷವಾಗಿದೆ" ಎಂದು ಆಸಿಫ್ ತಿಳಿಸಿದರು.

ಈ ಪಂದ್ಯಾವಳಿಯಲ್ಲಿ ಭಾರತ, ಜರ್ಮನಿ, ನೆದರ್ಲ್ಯಾಂಡ್ ಮತ್ತು ಪಾಕಿಸ್ತಾನಗಳು ಪಾಲ್ಗೊಳ್ಳಲಿವೆ.

ಕಳೆದ ತಿಂಗಳು ಐದು ಪಂದ್ಯಗಳನ್ನಾಡಲಿದ್ದ ಭಾರತದ ಕಿರಿಯರ ಹಾಕಿ ತಂಡದ ಪಾಕಿಸ್ತಾನ ಪ್ರವಾಸಕ್ಕೆ ಭಾರತ ಸರಕಾರ ಕೊನೆ ಕ್ಷಣದಲ್ಲಿ ಭದ್ರತೆಯ ಕಾರಣಗಳನ್ನು ಕೊಟ್ಟು ಅನುಮತಿ ನಿರಾಕರಿಸಿತ್ತು. ಇದರಿಂದ ಪಾಕಿಸ್ತಾನ ಹಾಕಿ ಫೆಡರೇಷನ್ ಸುಮಾರು ಆರು ಮಿಲಿಯನ್ ನಷ್ಟ ಅನುಭವಿಸಿತ್ತು ಎಂದು ಹೇಳಲಾಗಿದೆ.

ಬೆನಜೀರ್ ಭುಟ್ಟೋ ಅವರ ಗೌರವಾರ್ಥ ಮುಂದಿನ ವರ್ಷ ಪಾಕಿಸ್ತಾನವು ಎಂಟು ದೇಶಗಳ ನಡುವಿನ ಅಂತಾರಾಷ್ಟ್ರೀಯ ಹಾಕಿ ಟೂರ್ನಮೆಂಟನ್ನು ನಡೆಸಲಿದೆ. ಭದ್ರತಾ ಕಾರಣಗಳಿಂದಾಗಿ ಈ ಪಂದ್ಯಾವಳಿಯನ್ನು ತಟಸ್ಥ ಸ್ಥಳವೊಂದಕ್ಕೆ ವರ್ಗಾಯಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ