2010ಕ್ಕೆ ಸುತಿಲ್, ಲಿಯುಜಿ ಉಳಿಸಿಕೊಂಡ 'ಫೋರ್ಸ್ ಇಂಡಿಯಾ'

ಶುಕ್ರವಾರ, 27 ನವೆಂಬರ್ 2009 (19:15 IST)
ಸ್ಥಿರತೆ ಮತ್ತು ಸಾಂದ್ರತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಿರುವ ವಿಜಯ ಮಲ್ಯ ಮಾಲಕತ್ವದ ಫೋರ್ಸ್ ಇಂಡಿಯಾ ತನ್ನ ಚಾಲಕರಾದ ಆಡ್ರಿಯಾನ್ ಸುತಿಲ್ ಮತ್ತು ವಿಟಾಂತೋನಿಯೋ ಲಿಯುಜಿಯವರನ್ನು ಮುಂದಿನ ಫಾರ್ಮುಲಾ ವನ್ ಋತುವಿನಲ್ಲಿ ಮುಂದುವರಿಸುವ ತೀರ್ಮಾನ ಕೈಗೊಂಡಿದೆ.

ಫಾರ್ಮುಲಾ ವನ್ ತಂಡ 'ಫೋರ್ಸ್ ಇಂಡಿಯಾ'ವು ಆಡ್ರಿಯಾನ್ ಸುತಿಲ್ ಮತ್ತು ವಿಟಾಂತೋನಿಯೋ ಲಿಯುಜಿಯವರನ್ನು 2010ರ ಎಫ್ಐಎ ಫಾರ್ಮುಲಾ ವನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತಿದ್ದು, ಈ ಚಾಲಕರು ನಮ್ಮ ತಂಡದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಭರವಸೆ ನಮಗಿದೆ ಎಂದು ತಂಡ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ ವರ್ಷವು ಸುತಿಲ್‌ರವರ ಫಾರ್ಮುಲಾ ವನ್ ನಾಲ್ಕನೇ ಋತುವೆನಿಸಲಿದೆ. 26ರ ಹರೆಯದ ಜರ್ಮನ್ ಫೋರ್ಸ್ ಇಂಡಿಯಾದ ಈ ಹಿಂದಿನ ಮಾಲಕ ಸಂಸ್ಥೆ 'ಮಿಡ್ಲಾಂಡ್'ನಲ್ಲಿ ಪರೀಕ್ಷಾರ್ಥ ಮತ್ತು ಮೀಸಲು ಚಾಲಕನಾಗಿ 2006ರಲ್ಲಿ ಸೇರ್ಪಡೆಗೊಂಡಿದ್ದರು. ನಂತರ 2007ರಲ್ಲಿ ಸ್ಪೈಕರ್‌ನಲ್ಲಿ ಅವರು ರೇಸ್‌ನಲ್ಲಿ ಪಾಲ್ಗೊಳ್ಳಲು ಭಡ್ತಿ ಪಡೆದುಕೊಂಡಿದ್ದರು.

2009ರಲ್ಲಿ ಅವರು ಇಟಾಲಿಯನ್ ಗ್ರಾಂಡ್ ಪ್ರಿಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ತನ್ನ ಎಫ್1 ಶ್ರೇಷ್ಠ ಪ್ರದರ್ಶನವನ್ನು ನೀಡುವ ಮೂಲಕ ಫೋರ್ಸ್ ಇಂಡಿಯಾದಲ್ಲಿ ತನ್ನ ಮೊದಲನೇ ಸೀಟನ್ನು ಉಳಿಸಿಕೊಂಡಿದ್ದಾರೆ.

ಇದೇ ವರ್ಷ ಮೋಂಜಾದಲ್ಲಿ ನಡೆದಿದ್ದ ತಂಡದ ಪರೀಕ್ಷಾರ್ಥ ಮತ್ತು ಮೀಸಲು ಚಾಲಕನ ಸ್ಥಾನದಿಂದ ಮೇಲಕ್ಕೇರಿದ್ದ ಲಿಯುಜಿ ಫೋರ್ಸ್ ಇಂಡಿಯಾದಲ್ಲಿನ ತನ್ನ ಪಾತ್ರವನ್ನು ಮುಂದುವರಿಸಲಿದ್ದಾರೆ.

28ರ ಹರೆಯದ ಇಟಾಲಿಯನ್ 2005ರಲ್ಲಿ ರೆಡ್ ಬುಲ್ ರೇಸಿಂಗ್‌ನೊಂದಿಗೆ ತನ್ನ ಎಫ್1 ಕ್ರೀಡಾ ಜೀವನವನ್ನು ಆರಂಭಿಸಿದ್ದರು. ನಂತರ 2006 ಮತ್ತು 2007ರಲ್ಲಿ ಟೋರೋ ರೋಸೋ ಸೇರಿದ್ದ ಅವರು, 2008ರಲ್ಲಿ ಫೋರ್ಸ್ ಇಂಡಿಯಾದ ಮೂರನೇ ಚಾಲಕನೆನಿಸಿಕೊಂಡಿದ್ದರು.

ಸುತಿಲ್ ಮತ್ತು ಲಿಯುಜಿಯವರ ಪ್ರದರ್ಶನದಿಂದ ನಾವು ಸಂತಸಗೊಂಡಿದ್ದು, ಅವರನ್ನು ಮುಂದಿನ ಅವಧಿಗೂ ಮುಂದುವರಿಸಲು ಹರ್ಷವೆನಿಸುತ್ತಿದೆ. ತಂಡವು ಅಭಿವೃದ್ಧಿ ಹೊಂದುತ್ತಿರುವ ಈ ಹಂತದಲ್ಲಿ ಸ್ಥಿರತೆಯನ್ನು ನಾವು ಕಾಪಾಡಿಕೊಂಡು ಬಂದಿದ್ದು, ಕಳೆದ ಹಲವು ವರ್ಷಗಳ ನಂತರ ಮೊತ್ತ ಮೊದಲ ಬಾರಿಗೆ ಕೇವಲ ಚಾಲಕರನ್ನಷ್ಟೇ ಅಲ್ಲ-- ಜತೆಗೆ ಇಂಜಿನ್ ಮತ್ತು ಮುಖ್ಯ ಆಡಳಿತ ವರ್ಗವನ್ನೂ ಬದಲಾವಣೆ ಮಾಡುತ್ತಿಲ್ಲ ಎಂದು ಮಲ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ