ಬಿಸಿಸಿಐ ಸಂಸ್ಥೆ ವಿಶ್ವ ಕ್ರಿಕೆಟ್‌ ಮಂಡಳಿಗಳಲ್ಲಿಯೇ ಶ್ರೀಮಂತ ಸಂಸ್ಥೆ

ಭಾನುವಾರ, 4 ಜನವರಿ 2015 (12:37 IST)
ಇಡೀ ವರ್ಷ ಕೋರ್ಟ್‌, ಕಚೇರಿ ವಿವಾದಗಳಿಂದಲೇ ಸುದ್ದಿಯಾಗಿದ್ದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಇದೆಲ್ಲದರ ನಡುವೆಯೂ ಖುಷಿ ಪಡುವ ಸಂಗತಿಯೊಂದಿದೆ. ಬಿಸಿಸಿಐನ ಬ್ಯಾಂಕ್‌ ಬಾಲೆನ್ಸ್‌ ಇದೇ ಮೊದಲ ಬಾರಿಗೆ 4000 ಕೋಟಿ ರೂ. ದಾಟಿದೆ. 86 ವರ್ಷ ಪೂರೈಸಿ, 87ನೇ ವರ್ಷಕ್ಕೆ ಕಾಲಿಟ್ಟಿರುವ ಬಿಸಿಸಿಐ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದೆ.
 
2012-13ನೇ ಸಾಲಿನ ಮುಕ್ತಾಯಕ್ಕೆ 3621 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್‌ನಲ್ಲಿ ಹೊಂದಿದ್ದ ಬಿಸಿಸಿಐ, 2013-14ರಲ್ಲಿ ಈ ಮೊತ್ತವನ್ನು 4088 ಕೋಟಿ ರೂ.ಗೆ ಏರಿಸಿಕೊಂಡಿದೆ.
 
ಸಾಮಾನ್ಯವಾಗಿ ಕ್ರಿಕೆಟ್‌ ಪಂದ್ಯಗಳ ನೇರ ಪ್ರಸಾರ ಗುತ್ತಿಗೆಯಿಂದ ಬಿಸಿಸಿಐ ಭಾರೀ ಹಣ ಸಂಗ್ರಹಿಸುತ್ತದೆ. ಆದರೆ ಕಳೆದ ಸಾಲಿನಲ್ಲಿ ಬಿಸಿಸಿಐ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಹಣ ತುಂಬಿಸಿದ್ದು, ವಿವಾದಗಳ ಗೂಡಾಗಿದ್ದ ಐಪಿಎಲ್‌ ಪಂದ್ಯಾವಳಿ. ಕಳೆದ ಸಾಲಿನಲ್ಲಿ ಐಪಿಎಲ್‌ ಮೂಲಕ ಬಿಸಿಸಿಐ 1144 ಕೋಟಿ ರೂ. ಆದಾಯ ಪಡೆದುಕೊಂಡಿತ್ತು. ಖರ್ಚು ವೆಚ್ಚ ಕಳೆದ ಬಳಿಕ, ಇದೊಂದೇ ಟೂರ್ನಿಯಿಂದ ಬಿಸಿಸಿಐಗೆ 334 ಕೋಟಿ ರೂ. ಹಣ ಲಾಭ ಬಂದಿದೆ. ಉಳಿದಂತೆ, ಬೇರೆ ಪ್ರವಾಸಗಳ ಮೂಲಕ 137 ಕೋಟಿ ರೂ., ಬ್ಯಾಂಕ್‌ನಲ್ಲಿ ಇಟ್ಟ ಠೇವಣಿಗೆ 120 ಕೋಟಿ ರೂ. ಬಡ್ಡಿ, ಮಾಧ್ಯಮ ಹಕ್ಕಿನಿಂದ 108 ಕೋಟಿ ರೂ., ಚಾಂಪಿಯನ್ಸ್‌ ಲೀಗ್‌ನಿಂದ 59 ಕೋಟಿ ರೂ. ಮತ್ತು ಐಸಿಸಿಯಲ್ಲಿ ತನ್ನ ಪಾಲಿನ ಮೂಲಕ 32 ಕೋಟಿ ರೂ. ಪಡೆದುಕೊಂಡಿದೆ. ಹೀಗೆ ಒಂದು ವರ್ಷದಲ್ಲಿ 815 ಕೋಟಿ ರೂ. ಆದಾಯ ಬಂದಿದ್ದು, ಖರ್ಚು ಕಳೆದ ಬಳಿಕ 525 ಕೋಟಿ ರೂ. ಉಳಿಸಿಕೊಂಡಿದೆ.
 
ಕಾನೂನು ಹೋರಾಟಕ್ಕೆ 332 ಕೋಟಿ ರೂ.: ಇನ್ನೊಂದು ವಿಷಯವೆಂದರೆ, ಐಪಿಎಲ್‌ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸಲು ಬಿಸಿಸಿಐ, ತನ್ನ ಬಜೆಟ್‌ನಲ್ಲಿ 332 ಕೋಟಿ ರೂ. ನಷ್ಟು ಭಾರೀ ಹಣ ತೆಗೆದಿರಿಸಿದೆ ಎಂಬ ಅಚ್ಚರಿಯ ಅಂಶವೂ ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ