ನೆಹ್ರಾಗೆ ಕೊನೆಯ ಪಂದ್ಯ: ಗೆಲುವಿನ ವಿದಾಯ ನೀಡಲು ಕೊಹ್ಲಿ ಟೀಂ ಸಜ್ಜು
ಬುಧವಾರ, 1 ನವೆಂಬರ್ 2017 (15:37 IST)
ನವದೆಹಲಿ: 18 ವರ್ಷದ ಕ್ರಿಕೆಟ್ ಜೀವನಕ್ಕೆ ಟೀಂ ಇಂಡಿಯಾ ವೇಗಿ ಆಶಿಶ್ ನೆಹ್ರಾ ಇಂದು ವಿದಾಯ ಹೇಳಲಿದ್ದಾರೆ. ಕಿವೀಸ್ ವಿರುದ್ಧದ ಇಂದಿನ ಟಿ-20 ಪಂದ್ಯದಲ್ಲಿ ಗೆದ್ದು ನೆಹ್ರಾ ನಿವೃತ್ತಿಯನ್ನು ಸ್ಮರಣೀಯವಾಗಿರಿಸಲು ಕೊಹ್ಲಿ ಪಡೆ ಸಜ್ಜಾಗಿದೆ.
ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ಕಿವೀಸ್ ವಿರುದ್ಧ ನಡೆಯಲಿರುವ ಟಿ-20 ಪಂದ್ಯ ನೆಹ್ರಾ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ. ಈ ಪಂದ್ಯದ ನಂತರ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ.
38 ವರ್ಷದ ನೆಹ್ರಾ ಈಗಾಗಲೇ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಅದಕ್ಕಾಗಿ ಟೀಂ ಇಂಡಿಯಾ ಕೂಡ ಅವರನ್ನು ಅದ್ಧೂರಿಯಾಗಿ ಬೀಳ್ಕೊಡಲು ರೆಡಿಯಾಗಿದೆ. ವಿಶೇಷವೆಂದ್ರೆ ಈವರೆಗೂ ಕಿವೀಸ್ ವಿರುದ್ಧ ಭಾರತ ಟಿ-20ಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಆದ್ದರಿಂದ ಇಂದಿನ ಪಂದ್ಯ ಗೆದ್ದು ನೆಹ್ರಾ ಅವರನ್ನು ಜಯದ ಮೂಲಕ ಕಳುಹಿಸುವ ಗುರಿ ಹೊಂದಿದೆ.
1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಲ್ಲಿ ನೆಹ್ರಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 17 ಟೆಸ್ಟ್, 120 ಏಕದಿನ ಪಂದ್ಯ ಹಾಗೂ 26 ಟಿ-20 ಪಂದ್ಯಗಳಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.