ನಾರ್ವೆ: ವಿಶ್ವದ ಅಗ್ರಮಾನ್ಯ ಚೆಸ್‌ಪಟು ಮ್ಯಾಗ್ನಸ್ ಕಾರ್ಲ್‌ಸನ್ ಅವರು ನಾರ್ವೆ ಚೆಸ್ ಪ್ರತಿಷ್ಠಿತ ಟೂರ್ನಿಯಲ್ಲಿ 7ನೇ ಬಾರಿಗೆ ಪ್ರಶಸ್ತಿ ಗೆದ್ದರು. ಪ್ರಶಸ್ತಿಯ ರೇಸ್‌ನಲ್ಲಿದ್ದ ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್ ಅವರಿಗೆ ನಿರಾಸೆಯಾಯಿತು.
ಭಾರತದ ಡಿ.ಗುಕೇಶ್ ಅವರು ಅಂತಿಮ ಸುತ್ತಿನಲ್ಲಿ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕುರುವಾನ ಅವರ ಎದುರು ಪರಾಭವಗೊಂಡರು. ಹೀಗಾಗಿ ಪ್ರಶಸ್ತಿಯ ಅವಕಾಶವನ್ನು ಕೈಚೆಲ್ಲಿದರು.
ಭಾರತದವರೇ ಆದ ಅರ್ಜುನ್ ಇರಿಗೇಶಿ ವಿರುದ್ಧದ ಸ್ಪರ್ಧೆಯಲ್ಲಿ ಡ್ರಾ ಸಾಧಿಸಿದ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಪ್ರತಿಷ್ಠಿತ ಟೂರ್ನಿಯಲ್ಲಿ 7ನೇ ಬಾರಿಗೆ ಪ್ರಶಸ್ತಿ ಗೆದ್ದರು. ಟ್ರೋಫಿಯೊಂದಿಗೆ ₹65 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.
ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್‌ಸನ್, 9ನೇ ಸುತ್ತಿನ ಅಂತ್ಯಕ್ಕೆ 15 ಅಂಕಗಳನ್ನು ಹೊಂದಿದ್ದರು. ಆ ವೇಳೆ ಗುಕೇಶ್ ಅವರ ಬಳಿ 14.5 ಅಂಕಗಳಿದ್ದವು. ಹೀಗಾಗಿ, ಇವರಿಬ್ಬರ ನಡುವೆ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ಇತ್ತು. ಒಂದು ವೇಳೆ, ಹತ್ತನೇ ಹಾಗೂ ಅಂತಿಮ ಸುತ್ತಿನಲ್ಲಿ ಕುರುವಾನ ಎದುರು ಗೆದ್ದಿದ್ದರೆ, ನಾರ್ವೆ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಗುಕೇಶ್‌ಗೆ ಸಿಗುತ್ತಿತ್ತು.
ಇರಿಗೇಶಿ ಎದುರು ಡ್ರಾ ಸಾಧಿಸಿದ ಕಾರ್ಲ್‌ಸನ್, 16 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಟೂರ್ನಿಯನ್ನು ಅಂತ್ಯಗೊಳಿಸಿದರು. ಗುಕೇಶ್ ಎದುರು ಗೆದ್ದ ಕರುವಾನ, 15.5 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೇರಿದರು. ಗುಕೇಶ್ ಅವರ ಅಂಕಗಳಲ್ಲಿ ಬದಲಾವಣೆಯಾಗದಿದ್ದರೂ, ಮೂರನೇ ಸ್ಥಾನಕ್ಕೆ ಕುಸಿದರು. ಇರಿಗೇಶಿ 12.5 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ, ಉಕ್ರೇನ್‌ನ ಅನ್ನಾ ಮುಝಿಚುಕ್ (16.5 ಅಂಕ) ಪ್ರಶಸ್ತಿ ಜಯಿಸಿದರು. ಚೀನಾದ ಲೀ ಟಿಂಗ್ಜಿ (16 ಅಂಕ), ಭಾರತದ ಕೋನೇರು ಹಂಪಿ (15 ಅಂಕ) ಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದರು.