ರಾಂಚಿ ಫ್ರಾಂಚೈಸಿ ಖರೀದಿಸಿದ ಮಹೇಂದ್ರ ಸಿಂಗ್ ಧೋನಿ

ಭಾನುವಾರ, 26 ಅಕ್ಟೋಬರ್ 2014 (13:50 IST)
ಮೋಟಾರ್‌ ನ್ಪೋರ್ಟ್ಸ್ ಮತ್ತು ಫ‌ುಟ್‌ಬಾಲ್‌ನಲ್ಲಿ ಒಂದು ಕಾಲಿಟ್ಟಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ, ಇನ್ನೊಂದು ಹೆಜ್ಜೆ ಮುಂದಿರಿಸಿ 'ಹಾಕಿ ಇಂಡಿಯಾ ಲೀಗ್‌'ನ ರಾಂಚಿ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಈವರೆಗೆ 'ರಾಂಚಿ ರಿØನೋಸ್‌' ಎಂದು ಕರೆಸಿಕೊಳ್ಳುತ್ತಿದ್ದ ಈ ತಂಡ ಇನ್ನು ಮುಂದೆ 'ರಾಂಚಿ ರೇಸ್‌' ಎನಿಸಿಕೊಳ್ಳಲಿದೆ.
 
ಧೋನಿ ತಂಡದಲ್ಲಿ 'ಸಹಾರಾ ಪರಿವಾರ್‌' ಕೂಡ ಇರಲಿದೆ. ಧೋನಿ ಫ್ರಾಂಚೈಸಿ ಮುಖ್ಯಸ್ಥನಾಗಿದ್ದರೆ, ಸಹಾರಾ ಅನ್ಯ ನೆರವುಗಳನ್ನು ನೀಡಲಿದೆ ಎಂದು ಹೇಳಲಾಗಿದೆ. ಅವರು ಶನಿವಾರ ರಾಂಚಿ ಹೊಟೇಲ್‌ ಒಂದರಲ್ಲಿ ತಂಡದ ಜೆರ್ಸಿಯನ್ನೂ ಬಿಡುಗಡೆ ಮಾಡಿದರು.
 
'ಒಬ್ಬ ಕ್ರಿಕೆಟಿಗನಾಗಿ ಕ್ರಿಕೆಟ್‌ ಆಡುವುದು ನನ್ನ ಮೊದಲ ಕೆಲಸ. ಆದರೆ ಕ್ರೀಡಾಪಟುವಾಗಿ ರಾಷ್ಟ್ರೀಯ ಕ್ರೀಡೆಯನ್ನು ಪ್ರೋತ್ಸಾಹಿಸುವುದು ನನ್ನ ಜವಾಬ್ದಾರಿ. ಇದು ನನ್ನ ಜೀವನದ ವಿಶೇಷ ದಿನ. ಹಾಕಿ ತಂಡದ ಜತೆ ಕೈಜೋಡಿಸಲು ಬಹಳ ಸಂತೋಷವಾಗಿದೆ' ಎಂದು ಧೋನಿ ಈ ಸಂದರ್ಭದಲ್ಲಿ ಹೇಳಿದರು.
 
ಧೋನಿಗಿಂತ ಮುಂಚೆ ಪಟೇಲ್‌-ಪಿಎಸ್‌ಗೂಪ್‌ ಮತ್ತು ಯುನಿಎಕ್ಸೆಲ್‌ ಗ್ರೂಪ್‌ ರಾಂಚಿ ಫ್ರಾಂಚೈಸಿ ಮಾಲಕತ್ವ ಹೊಂದಿದ್ದವು. ಆದರೆ ಇಬ್ಬರ ನಡುವೆ ಹೊಂದಾಣಿಕೆ ಕೂಡಿಬರದ ಹಿನ್ನೆಲೆಯಲ್ಲಿ ಮಾಲಕತ್ವದಿಂದ ಹಿಂದೆ ಸರಿದಿದ್ದವು. ಈ ತಂಡವನ್ನು ಈಗ ಧೋನಿ ಖರೀದಿಸಿದ್ದಾರೆ.
 
ಮಹೇಂದ್ರ ಸಿಂಗ್‌ ಧೋನಿ ಉಳಿದೆರಡು ಕ್ರೀಡೆಗಳಿಗೂ ಹಣ ಹೂಡಿರುವುದು ಉಲ್ಲೇಖನೀಯ. ಈಗ ನಡೆಯುತ್ತಿರುವ ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ನಲ್ಲಿ ಚೆನ್ನೈಯಿನ್‌ ಎಫ್ಸಿ ಹಾಗೂ ಮಹೀ ರೇಸಿಂಗ್‌ನ ಸಹ ಮಾಲಕತ್ವವನ್ನೂ ಧೋನಿ ಹೊಂದಿದ್ದಾರೆ.
 
ಜನವರಿಯಲ್ಲಿ ಹಾಕಿ ಲೀಗ್‌
 
ಸತತ 2 ವರ್ಷದಿಂದ ನಡೆಯುತ್ತಿರುವ ಹಾಕಿ ಲೀಗ್‌ ಮುಂದಿನ ವರ್ಷದ ಜನವರಿ-ಫೆಬ್ರವರಿಯಲ್ಲಿ ನಡೆಯಲಿದೆ. ಭಾರತೀಯ ಹಾಕಿಯನ್ನು ಮೇಲೆತ್ತುವ ಉದ್ದೇಶದಿಂದ ಹಾಕಿ ಇಂಡಿಯಾ ಈ ಕೂಟವನ್ನು ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ