ಭಾರತಕ್ಕೆ ಚಿನ್ನ ತರುತ್ತಾರಾ ಪಿ.ವಿ. ಸಿಂಧು

ಶುಕ್ರವಾರ, 19 ಆಗಸ್ಟ್ 2016 (10:34 IST)
ಹರಿಯಾಣಾದ ಸಾಕ್ಷಿ ಮಲ್ಲಿಕ್ ರಕ್ಷಾಬಂಧನದ ಉಡುಗೊರೆಯಾಗಿ ಕಂಚಿನ ಪದಕ ತಂದುಕೊಟ್ಟ ಬೆನ್ನಲ್ಲೇ ಮತ್ತೊಬ್ಬ ಕ್ರೀಡಾಪಟು ದೇಶಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ. 

ಬ್ಯಾಡ್ಮಿಂಟನ್ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ತೆಲಂಗಾಣದ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿರುವುದರಿಂದ ದೇಶಕ್ಕೆ ಇನ್ನೊಂದು ಪದಕ ಖಚಿತವಾಗಿದೆ. ಅದರಲ್ಲೂ ಸಿಂಧು ಚಿನ್ನದ ಪದಕವನ್ನೇ ಬೇಟೆಯಾಡಲಿದ್ದಾರೆ ಎಂಬ ಆಸೆ ದೇಶಾದ್ಯಂತ ಗರಿಗೆದರಿದೆ.
 
ಸೆಮಿಫೈನಲ್ ಪಂದ್ಯದಲ್ಲಿ ಅವರು ಜಪಾನ್‌ನ ನೊಜೊಮಿ ಒಕುಹರ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. 21-19, 21-10ಅಂತರದೊಂದಿಗೆ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಸಿಂಧು ಗೆದ್ದರೆ ಸ್ವರ್ಣ, ಸೋತರೆ ಬೆಳ್ಳಿ ನಿಶ್ಚಿತ.
 
ಫೈನಲ್‌ನಲ್ಲಿ ಸಿಂಧು, ಸ್ಪೇನ್‌ನ ಕ್ಯಾರೋಲಿನಾ ಮರೀನ್ ಅವರನ್ನು ಎದುರಿಸಲಿದ್ದಾರೆ. ಮರೀನ್  ಚೀನಾದ ಕ್ಸಿರುಯಿ ಲಿ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಇಂದು ರಾತ್ರಿ ಭಾರತೀಯ ಕಾಲಮಾನ 7.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. 
 
ತಮ್ಮ ಮಗಳು ಹೊಸ ದಾಖಲೆ ಮಾಡಲಿದ್ದಾಳೆ. 100% ಫೈನಲ್‌ನಲ್ಲಿ ಗೆಲ್ಲುತ್ತಾಳೆ. ಹೈದರಾಬಾದ್ ಅಷ್ಟೇ ಅಲ್ಲ ಸಂಪೂರ್ಣ ಭಾರತಕ್ಕೆ ಹೆಮ್ಮೆ ತರಲಿದ್ದಾಳೆ ಎಂದು ಸಿಂಧು ತಾಯಿ ಪಿ.ವಿ.ವಿಜಯಾ ಭರವಸೆ ವ್ಯಕ್ತಪಡಿಸಿದ್ದಾರೆ.
 
ಸಿಂಧು ಅವರ ಸಾಧನೆಗೆ ಸಂತಷ ವ್ಯಕ್ತ ಪಡಿಸಿರುವ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಫೈನಲ್‌ಗೆ ಶುಭ ಹಾರೈಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ