ಭಾರತ ತಂಡದ ನಾಯಕ ರೋಹಿತ್‌ ಶರ್ಮಗೆ ಕೊರೊನಾ ಪಾಸಿಟಿವ್!

ಭಾನುವಾರ, 26 ಜೂನ್ 2022 (16:28 IST)
ಭಾರತ ತಂಡದ ನಾಯಕ ರೋಹಿತ್‌ ಶರ್ಮ ಇಂಗ್ಲೆಂಡ್‌ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಕೇವಲ ಆರು ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್‌ ಸೋಂಕು ದೃಢಪಟ್ಟಿದೆ.
ಲೀಸೆಸ್ಟರ್‌ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದ ರೋಹಿತ್ ಅವರನ್ನು ಶನಿವಾರ ನಡೆಸಿದ ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಸೋಂಕು ದೃಢಪಟ್ಟಿದ್ದು,  ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಅಭ್ಯಾಸ ಪಂದ್ಯದ ಮೂರನೇ ದಿನದಾಟದ ನಂತರ ರೋಹಿತ್ ಗೆ ಕೊರೊನಾ ಪಾಸಿಟಿವ್ ಆಗಿರುವುದು ಸುದ್ದಿ ಬಹಿರಂಗವಾಗಿದೆ.  ಮೊದಲ ಇನ್ನಿಂಗ್ಸ್‌ನಲ್ಲಿ 25 ರನ್ ಗಳಿಸಿದ ರೋಹಿತ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿರಲಿಲ್ಲ. ಇದಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಭಾರತ ತೊರೆಯುವ ಮುನ್ನ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಮುಂಬರುವ ಟೆಸ್ಟ್‌ಗೆ ಆಗಮಿಸುವುದು ವಿಳಂಬವಾಯಿತು.
ಭಾನುವಾರ ಟ್ವೀಟ್‌ ಮಾಡಿರುವ ಬಿಸಿಸಿಐ, ಶನಿವಾರ ರಾಪಿಡ್ ಆಂಟಿಜಿನ್ ಟೆಸ್ಟ್ ನಡೆಸಿದ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್-19 ದೃಢಪಟ್ಟಿದೆ.  ಅವರು ಪ್ರಸ್ತುತ ತಂಡದ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ ಎಂದು ತಿಳಿಸಿದೆ.
ರೋಹಿತ್ ಶರ್ಮಾ ಗುಣಮುಖರಾದ ನಂತರ   ಜುಲೈ 1 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ  ಐದನೇ ಟೆಸ್ಟ್‌ನಲ್ಲಿ ರೋಹಿತ್ ಇಂಗ್ಲೆಂಡ್ ವಿರುದ್ಧ ತಂಡವನ್ನು ಮುನ್ನಡೆಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ