ಸೈನಾ ನೆಹ್ವಾಲ್ ಪದ್ಮಭೂಷಣ ಪ್ರಶಸ್ತಿ ಅರ್ಜಿ ತಿರಸ್ಕರಿಸಿದ ಕ್ರೀಡಾ ಸಚಿವಾಲಯ

ಶನಿವಾರ, 3 ಜನವರಿ 2015 (18:51 IST)
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಪದ್ಮಭೂಷಣ ಪ್ರಶಸ್ತಿಗಾಗಿ ಸಲ್ಲಿಸಿದ ಅರ್ಜಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.
 
ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)  ಸೈನಾ ನೆಹ್ವಾಲ್ ಹೆಸರನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಆದರೆ ಕ್ರೀಡಾ ಸಚಿವಾಲಯ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರನ್ನು ಪ್ರಶಸ್ತಿಗಾಗಿ ಆಯ್ಕೆಮಾಡಿದೆ.
 
ಸುಶೀಲ್ ಕುಮಾರ್ ಅವರ ಹೆಸರನ್ನು ಪ್ರಶಸ್ತಿಗಾಗಿ ಕಳುಹಿಸಲಾಗಿದೆ ಮತ್ತು ಕ್ರೀಡಾ ಸಚಿವಾಲಯ ನನ್ನ ಹೆಸರನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ನನಗೆ ತಿಳಿದುಬಂದಿದೆ. ಎರಡು ಪದ್ಮ ಪ್ರಶಸ್ತಿಗಳ ನಡುವೆ 5 ವರ್ಷದ ಅಂತರ ಇರಬೇಕು ಎಂದು ಸಚಿವಾಲಯದ ನಿಬಂಧನೆಯಲ್ಲಿ ಹೇಳಲಾಗಿದೆ. ಹೀಗಿರುವಾಗ ಕ್ರೀಡಾ ಸಚಿವಾಲಯ ಆತನ (ಸುಶೀಲ್ ಕುಮಾರ್) ಹೆಸರು ಕಳುಹಿಸಿದ್ದಾರೆ. ನನ್ನ ಹೆಸರನ್ನು ಯಾಕೆ ಶಿಫಾರಸು ಮಾಡಿಲ್ಲ? ನಾನು 5 ವರ್ಷಗಳನ್ನು ಪೂರೈಸಿದ್ದೇನೆ. ಈ ಬಗ್ಗೆ ನನಗೆ ಬೇಸರವಾಗಿದೆ ಎಂದು ಸೈನಾ ಹೇಳಿದ್ದಾರೆ.
 
ಸೈನಾ ಅವರಿಗೆ 2010ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.
 
ಸುಶೀಲ್ ಕುಮಾರ್ ಅವರಿಗೆ 2011ರಲ್ಲಿ ಪದ್ಮಶ್ರೀ ನೀಡಲಾಗಿತ್ತು. ಆದಾಗ್ಯೂ, ಸುಶೀಲ್ ಕುಮಾರ್ ಅವರು ಪದ್ಮಶ್ರೀ ಪಡೆದು 5 ವರ್ಷಗಳಾಗದೇ ಇದ್ದರೂ ಅವರನ್ನು ಪದ್ಮಭೂಷಣ  ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
 
ಇತ್ತ ಸೈನಾ ಹೆಸರನ್ನು ಕಳೆದ ವರ್ಷ ಪ್ರಶಸ್ತಿಗಾಗಿ ಕ್ರೀಡಾ ಇಲಾಖೆಗೆ ಕಳುಹಿಸಿಕೊಟ್ಟಿದ್ದರೂ ಪದ್ಮ ಪ್ರಶಸ್ತಿ ಪಡೆದು 5 ವರ್ಷ ಪೂರೈಸಿಲ್ಲ ಎಂಬ ಕಾರಣ ನೀಡಿ ಕೈಬಿಡಲಾಗಿತ್ತು. ಈ ವರ್ಷವೂ ಇದು ಪುನರಾವರ್ತಿಸಿದೆ. ಹೀಗೆ ಯಾಕೆ ಮಾಡಲಾಗುತ್ತಿದ್ದೆ? ನನ್ನ ಹೆಸರನ್ನು ಯಾಕೆ ಶಿಫಾರಸು ಮಾಡುತ್ತಿಲ್ಲ? ಎಂದು ಸೈನಾ ಕ್ರೀಡಾ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ