ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಚಾಂಪಿಯನ್ಸ್

ಭಾನುವಾರ, 12 ಜುಲೈ 2015 (10:37 IST)
ಲಂಡನ್ : ಟೆನ್ನಿಸ್  ತಾರೆ ಸಾನಿಯಾ ಮಿರ್ಜಾ ತಮ್ಮ ಪ್ರಪ್ರಥಮ ಮಹಿಳಾ ಡಬಲ್ಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸಾನಿಯಾ ಅವರು ತಮ್ಮ ಸ್ವಿಸ್ ಜೋಡಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಅಂತಿಮ ಸೆಟ್‌ನಲ್ಲಿ ಅಚ್ಚರಿಯ ಕಮ್ ಬ್ಯಾಕ್ ಮೂಲಕ 2015ರ ವಿಂಬಲ್ಡನ್ ಕಿರೀಟವನ್ನು ಶನಿವಾರ ಮುಡಿಗೇರಿಸಿಕೊಂಡರು.
 
34 ವರ್ಷದ ಹಿಂಗಿಸ್ ಮತ್ತು 28 ವರ್ಷ ವಯಸ್ಸಿನ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಮೊದಲ ಸೆಟ್‌ನಲ್ಲಿ ಸೋಲನುಭವಿಸಿ ಅಂತಿಮ ಸೆಟ್‌ನಲ್ಲಿ 2-5ರಿಂದ ಹಿಂದಿದ್ದರೂ ರಷ್ಯಾದ ಜೋಡಿಗಳಾದ ಎಕ್ತೆರಿನಾ ಮಕರೋವಾ ಮತ್ತು ಎಲೆನಾ ವೆಸ್ನಿನಾ ವಿರುದ್ಧ 5-7, 7-6(7/4), 7-5 ಸೆಟ್‌ಗಳಿಂದ ಜಯಗಳಿಸಿದರು.
 
 ಇದು ಟಾಪ್ ಸೀಡ್‌ನ ಮೊದಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಜೋಡಿಯಾಗಿ ಆಡಲು ನಿರ್ಧರಿಸಿದ್ದರು.  ಹಿಂಗಿಸ್ 1996ರಲ್ಲಿ ಹೆಲೆನಾ ಸುಕೋವಾ ಮತ್ತು 1998ರಲ್ಲಿ ಜಾನಾ ನೊವೋಟ್ನಾ ಜೊತೆ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಸಾನಿಯಾ ಮಿರ್ಜಾ ಮಿಶ್ರಿತ ಡಬಲ್ಸ್‌ಗಳಲ್ಲಿ ಜಯಗಳಿಸಿದ್ದರೂ, ಗ್ರಾಂಡ್ ಸ್ಲಾಮ್‌ನಲ್ಲಿ ಮಹಿಳಾ ಡಬಲ್ಸ್ ಗೆಲ್ಲುತ್ತಿರುವುದು ಇದೇ ಮೊದಲು. 
 
 ಅಂತಿಮ ಸೆಟ್‌ನಲ್ಲಿ 5-5 ಪಾಯಿಂಟ್‌ಗಳಾಗಿದ್ದಾಗ ಮಬ್ಬಾದ ಬೆಳಕಿನಿಂದ ಆಟವನ್ನು ಸ್ಥಗಿತಗೊಳಿಸಲಾಯಿತು. ಆಟಗಾರರು ಹಿಂತಿರುಗಿದಾಗ ಹಿಂಗಿಸ್ ಮತ್ತು ಮಿರ್ಜಾ ಮುಂದಿನ ಎರಡು ಆಟಗಳಲ್ಲಿ ಗೆದ್ದು ಪ್ರಶಸ್ತಿಯನ್ನು ಬಾಚಿಕೊಂಡರು.
 
 

ವೆಬ್ದುನಿಯಾವನ್ನು ಓದಿ