ಸೈನಾ ನೆಹ್ವಾಲ್‌ ಮುಡಿಗೆ ಮತ್ತೊಂದು ಗರಿ

ಸೋಮವಾರ, 26 ಜನವರಿ 2015 (15:55 IST)
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೊಸ ವರ್ಷದಲ್ಲಿ ಗೆಲವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
 
ಸೈಯ್ಯದ್ ಮೋದಿ ಇಂಟರ್‍ನ್ಯಾಷನಲ್ ಇಂಡಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಸೈನಾ ತಮ್ಮ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
 
ಭಾನುವಾರ ಬಾಬು ಬನಾರಸಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ  ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್ ಸ್ಪೇನ್ ಆಟಗಾರ್ತಿ ಕ್ಯಾರೋಲಿನ್ ಮರೀನ್ ವಿರುದ್ಧ 19--21, 25--23, 21--16 ಗೇಮ್ ಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಒಂದು ಗಂಟೆ 19ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಹೋರಾಟ ನಡೆಸಿದ ಸೈನಾ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು.
 
ಪಂದ್ಯದ ಮೊದಲ ಗೇಮ್ ನಲ್ಲಿ ಎದುರಾಳಿ ಆಟಗಾರ್ತಿ ವಿರುದಟಛಿ ಮಂಕಾಗಿ ಕಂಡ ನೆಹ್ವಾಲ್ 19-21 ಅಂಕಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ, ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಗೇಮïನಲ್ಲಿ ತಿರುಗಿ ಬಿದ್ದ ಸೈನಾ 25-23 ಅಂಕ ಸಂಪಾದಿಸಿ ಸಮಬಲ ಸಾಧಿಸಿದರು. ಇದೇ ನಿಯಂತ್ರಣವನ್ನು ಮೂರನೇ ಗೇಮ್ ನಲ್ಲೂ ಮುಂದುವರಿಸಿದ ಭಾರತದ ತಾರೆ 21-16 ಅಂತರದ ಮುನ್ನಡೆಯೊಂದಿಗೆ ಗೆಲವಿನ ನಗೆ ಬೀರಿದರು.
 
ಕಶ್ಯಪ್‍ಗೆ ಕಿರೀಟ
 
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾರತದವರೆ ಆಗಿದ್ದ ಕಿಡಂಬಿ ಶ್ರೀಕಾಂತ್ ವಿರುದ್ಧ ಫೈನಲ್‍ನಲ್ಲಿ ಸೆಣಸಾಡಿದ ಕಶ್ಯಪ್ 23-21, 23-21 ಗೇಮ್ ಗಳ ಅಂತರದಲ್ಲಿ ಗೆಲುವು ದಾಖಲಿಸಿದರು.

ವೆಬ್ದುನಿಯಾವನ್ನು ಓದಿ