ಟೆನಿಸ್: ಪ್ರಶಸ್ತಿಯ ಹಂತಕ್ಕೆ ತಲುಪಿದ ಸೆರೆನಾ ವಿಲಿಯಮ್ಸ್

ಭಾನುವಾರ, 26 ಅಕ್ಟೋಬರ್ 2014 (14:38 IST)
ಸೆಮಿಫೈನಲ್‌ ಕಂಟಕದಿಂದ ಪಾರಾದ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ 'ಡಬ್ಲ್ಯುಟಿಎ ಫೈನಲ್ಸ್‌' ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪಯಣ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಸೆರೆನಾ ಎದುರಾಳಿಯಾಗಿ ಕಣಕ್ಕಿಳಿಯುವವರು ರೊಮೇನಿಯಾದ ಸಿಮೋನಾ ಹಾಲೆಪ್‌.
 
ಎರಡು ಬಾರಿಯ ಹಾಲಿ ಚಾಂಪಿಯನ್‌ ಆಗಿರುವ ಸೆರೆನಾ ವಿಲಿಯಮ್ಸ್‌ ಶನಿವಾರದ ಮೊದಲ ಸೆಮಿಫೈನಲ್‌ನಲ್ಲಿ ಭಾರೀ ಹೋರಾಟ ಸಂಘಟಿಸಿದ ಕ್ಯಾರೋಲಿನ್‌ ವೋಜ್ನಿಯಾಕಿ ವಿರುದ್ಧ 2-6, 6-3, 7-6 (8-6) ಅಂತರದ ಜಯ ಸಾಧಿಸಿ ನಿಟ್ಟುಸಿರೆಳೆದರು. ಆದರೆ ಇನ್ನೊಂದು ಉಪಾಂತ್ಯದಲ್ಲಿ ಅಗ್ನಿàಸ್ಕಾ ರಾದ್ವಂಸ್ಕಾ ಎದುರಾಳಿ ಹಾಲೆಪ್‌ಗೆ ಸುಲಭದ ತುತ್ತಾದರು. ಹಾಲೆಪ್‌ 6-2, 6-2 ನೇರ ಸೆಟ್‌ಗಳಿಂದ ಗೆಲುವು ಒಲಿಸಿಕೊಂಡರು.
 
ರವಿವಾರದ ಫೈನಲ್‌ನಲ್ಲಿ ಸೆರೆನಾ ಜಯಶಾಲಿಯಾದರೆ 1992ರ ಬಳಿಕ ಈ ಕೂಟದ ಮೊದಲ ಹ್ಯಾಟ್ರಿಕ್‌ ಸಾಧಕಿಯಾಗಿ ದಾಖಲಾಗುತ್ತಾರೆ. ಅಂದು ಮೋನಿಕಾ ಸೆಲೆಸ್‌ ಈ ಸಾಧನೆಗೈದಿದ್ದರು.
 
ಯುಎಸ್‌ ಓಪನ್‌ ಫೈನಲ್‌ ಸೇರಿದಂತೆ ವೋಜ್ನಿಯಾಕಿ ವಿರುದ್ಧ ಸೆರೆನಾ ಈ ವರ್ಷದ 4ನೇ ಜಯವನ್ನು ಒಲಿಸಿಕೊಂಡದ್ದು ವಿಶೇಷ. 'ಕ್ಯಾರೋಲಿನ್‌ ಅದ್ಭುತ ಹಾಗೂ ನಂಬಲಾಗದ ಪ್ರದರ್ಶನವಿತ್ತರು. ಹೀಗಾಗಿ ನನಗೆ ಈ ಸವಾಲು ಬಹಳ ಕಠಿನವಾಗಿ ಪರಿಣಮಿಸಿತು. ನಿಜಕ್ಕಾದರೆ ಈ ಕೂಟದಲ್ಲಿ ಒಮ್ಮೆಯೂ ಸೋಲದ ವೋಜ್ನಿಯಾಕಿಯೇ ಈ ಪಂದ್ಯ ಗೆಲ್ಲಲು ಅರ್ಹಳಾಗಿದ್ದಳು ಎಂಬುದು ಸೆರೆನಾ ಪ್ರತಿಕ್ರಿಯೆ.
 
23ರ ಹರೆಯದ ಸಿಮೋನಾ ಹಾಲೆಪ್‌ ಈ ಪಂದ್ಯಾವಳಿಯ ಮೊದಲ ಪ್ರವೇಶದಲ್ಲೇ ಫೈನಲ್‌ ತಲುಪಿದ ಸಾಧನೆ ಮಾಡಿದರು.

ವೆಬ್ದುನಿಯಾವನ್ನು ಓದಿ