‘ಪದ್ಮ ಪ್ರಶಸ್ತಿ ಪಡೆಯಲು ಇನ್ನೂ ಏನು ಸಾಧನೆ ಮಾಡಬೇಕು?’

ಶುಕ್ರವಾರ, 27 ಜನವರಿ 2017 (09:00 IST)
ನವದೆಹಲಿ: 16 ವಿಶ್ವಕಪ್, 2 ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿದ್ದೇನೆ. ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮ ಭೂಷಣನಾಗಲು ಇನ್ನೇನು ಸಾಧನೆ ಮಾಡಬೇಕು? ಹೀಗಂತ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಕ್ರೀಡಾ ಸಚಿವರಿಗೇ ಸವಾಲೆಸೆದಿದ್ದಾರೆ.
 

68 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರ ಪ್ರತೀ ವರ್ಷ ಪದ್ಮ ಪ್ರಶಸ್ತಿ ನೀಡುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಹಲವರಿಗೆ ಈ ಗೌರವ ಸಂದಿದೆ. ಆದರೂ ಇಷ್ಟೆಲ್ಲಾ ಸಾಧನೆ ಮಾಡಿದ ತಮ್ಮನ್ನು ಕಡೆಗಣಿಸಿದ್ದು ಅಡ್ವಾಣಿಗೆ ಬೇಸರ ತಂದಿದೆ.

 ಈ ಹಿನ್ನಲೆಯಲ್ಲಿ ತಮಗೆ 28 ನೇ ರಾಷ್ಟ್ರೀಯ ಸ್ನೂಕರ್ ಪ್ರಶಸ್ತಿ ಗೆದ್ದಿದ್ದಕ್ಕೆ ಕ್ರೀಡಾ ಸಚಿವ ವಿಜಯ್ ಗೊಯೆಲ್ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಕ್ಕೆ ಪ್ರತಿಕ್ರಿಯಿಸುವಾಗ ಅಡ್ವಾಣಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಇದು ಸತತ ಎರಡನೇ ಬಾರಿ ಅಡ್ವಾಣಿಗೆ ಪದ್ಮ ಪ್ರಶಸ್ತಿ ಕೈ ತಪ್ಪುತ್ತಿರುವುದು.

ಇನ್ನೊಂದೆಡೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡಾ ಪ್ರಶಸ್ತಿಗೆ ತಮ್ಮನ್ನು ಪರಿಗಣಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪದ್ಮ ಪ್ರಶಸ್ತಿಗೆ ಮಾನದಂಡವೇನು ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ